ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ಆರಂಭಿಸಿವೆ.
ಎನ್‌ಡಿಎ ಮೈತ್ರಿಕೂಟದ ನಾಯಕ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇಂಡಿಯಾ ಮೈತ್ರಿಕೂಟದ ನಾಯಕ ಹಾಗೂ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ, ಇದೀಗ ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ನಡೆದಿದ್ದು. ನವದೆಹಲಿಯಲ್ಲಿ ಎರಡೂ ಒಕ್ಕೂಟಗಳ ಮಹತ್ವದ ಸಭೆ ನಡೆಯಲಿದೆ. ಬಿಜೆಪಿ ಬಹುಮತ ದಾಟದಿದ್ದರೂ, ಎನ್‌ಡಿಎ ಒಕ್ಕೂಟ ಬಹುಮತ ಪಡೆದಿರುವ ಹಿನ್ನೆಲೆ ಎನ್‌ಡಿಎಗೆ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಆದರೆ, ಮೈತ್ರಿ ಪಕ್ಷಗಳನ್ನು ಹಿಡಿದಿಟ್ಟುಕೊಳ್ಳುವುದು ಬಿಜೆಪಿ ಸವಾಲಾಗಿದೆ. ಒಟ್ಟು 543 ಲೋಕಸಭೆ ಸ್ಥಾನಗಳ ಪೈಕಿ ಎನ್‌ಡಿಎ ಒಕ್ಕೂಟ 294 ಸ್ಥಾನಗಳನ್ನು ಪಡೆದು 272ರ ಮ್ಯಾಜಿಕ್ ನಂಬರ್‌ಗಿಂತ 22 ಹೆಚ್ಚುವರಿ ಸ್ಥಾನಗಳನ್ನ ಪಡೆದಿದೆ. ಇಂಡಿಯಾ ಒಕ್ಕೂಟ 234 ಸ್ಥಾನಗಳನ್ನು ಪಡೆದಿದ್ದು, ಬಹುಮತಕ್ಕೆ 38 ಸ್ಥಾನಗಳ ಕೊರತೆ ಇದೆ. ಇದನ್ನು ತುಂಬಲು ಹಳೆಯ ಮಿತ್ರರಾದ ಜೆಡಿಯುನ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡುವನ್ನು ಮನವೊಲಿಸಲು ಇಂಡಿಯಾ ನಾಯಕರು ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ. ಚುನಾವಣೆ ಫಲಿತಾಂಶ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಇಂಡಿಯಾ ಒಕ್ಕೂಟದ ಪಾಲುದಾರರೊಂದಿಗೆ ಮಾತನಾಡಿದ ಬಳಿಕವಷ್ಟೇ ಟಿಡಿಪಿ ಮತ್ತು ಜೆಡಿಯು ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉತ್ತರಿಸುತ್ತೇನೆ” ಎಂದಿದ್ದಾರೆ.