ಹುಬ್ಬಳ್ಳಿ : ಪೊಲೀಸ್ ಇಲಾಖೆಯ ಸಂಚಾರಿ ಇ ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50 ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶಿಸಿದೆ.
ಫೆ.11 ರೊಳಗಾಗಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಒಂದು ಬಾರಿಯ ಕ್ರಮವಾಗಿ ( ಒನ್ ಟೈಮ್ ಸೆಟ್ಲಮೆಂಟ್ ) ಸರ್ಕಾರ ದಂಡದ ಮೊತ್ತದಲ್ಲಿ ಶೇ 50 ರಷ್ಟು ರಿಯಾಯಿತಿ ನೀಡಿ ಫೆ.2 ರಂದು ಆದೇಶಿಸಿದೆ.
ಫೆ.11 ರಂದು ಲೋಕ್ ಅದಾಲತ್ ನಡೆಯಲಿದ್ದು, ಈ ಕುರಿತು ಹೈಕೋರ್ಟ್ ನ್ಯಾಯಾಧೀಶರಾದ ಬಿ.ವೀರಪ್ಪ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅದ್ಯಕ್ಷರು ಜನವರಿ 27 ರಂದು ಸಭೆ ನಡೆಸಿದ್ದರು. ಸಭೆಯ ನಡಾವಳಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ನಡಾವಳಿಯಲ್ಲಿನ ಪ್ರಸ್ತಾವನೆ ಪರಿಗಣಿಸಿ ಸರ್ಕಾರ ಈ ಆದೇಶ ಹೊರಡಿಸಿದೆ.
ಸಂಬಂಧಪಟ್ಟವರು ಫೆ.11 ರೊಳಗೆ ಶೇ 50 ರಷ್ಟು ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕು. ಹೈಕೋರ್ಟ್ ನ್ಯಾಯಾಧೀಶರು ಮತ್ತು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನೀಡಿದ ಈ ವಿಶೇಷ ಅವಕಾಶದ ಪ್ರಯೋಜನ ಪಡೆಯಬೇಕು ಎಂದು ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರಾದ ಸಿ.ಆರ್. ಪಾಟೀಲ ಅವರು ವಕೀಲರ ಸಂಘದ ಪರವಾಗಿ ಮನವಿ ಮಾಡಿದ್ದಾರೆ.