ವಿದ್ಯಾನಗರದಲ್ಲಿ ಹೊತ್ತಿ ಉರಿದ ಕಾರು

Advertisement

ಹುಬ್ಬಳ್ಳಿ: ಚಲಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹಠಾತ್ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿದ ಘಟನೆ ಇಲ್ಲಿನ ವಿದ್ಯಾನಗರದ ಹು-ಧಾ ಮುಖ್ಯ ರಸ್ತೆ( ರಿಲಯನ್ಸ್ ಡಿಜಿಟಲ್ ಮುಂದೆ) ಶುಕ್ರವಾರ ಸಂಜೆ ಸಂಭವಿಸಿದೆ.
ಧಾರವಾಡಕ್ಕೆ ತೆರಳುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ದಿನಪೂರ್ತಿ ಟ್ರಾಫಿಕ್‌ನಿಂದ ಕೂಡಿದ ರಸ್ತೆಯಲ್ಲಿಯೇ ಈ ಅಗ್ನಿ ಅವಘಡ ಸಂಭವಿಸಿದ್ದರಿಂದ ಈ ಮಾರ್ಗದಲ್ಲಿ ಹುಬಳ್ಳಿಯಿಂದ ಧಾರವಾಡ ಕಡೆಗೆ ಸಂಚರಿಸುವ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಏಕಾಏಕಿ ಬೆಂಕಿ ತಗುಲಿರುವ ಕಾರಣ ತಿಳಿದು ಬಂದಿಲ್ಲ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಉತ್ತರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರಾಫಿಕ್ ಸರಳಗೊಳಿಸಿದ್ದಾರೆ.