ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಂಚರತ್ನ ಯಾತ್ರೆ ಸೋಮವಾರ ಬಾದಾಮಿ ಕ್ಷೇತ್ರದಾದ್ಯಂತ ಸಂಚರಿಸಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕರಾಗಿರುವ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವ ಗುರಿಹೊಂದಿರುವ ದಳಪತಿಗಳು ಕ್ಷೇತ್ರದ ಹಳ್ಳಿ, ಹಳ್ಳಿಗೂ ಭೇಟಿ ನೀಡಿದರು.
ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣದ ಮಾರುತೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಮುಂದುವರಿಸಿದ ಕುಮಾರಸ್ವಾಮಿ ಅವರು ಪಟ್ಟಣದಲ್ಲಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಭಾಗಿಯಾದರು. ಕುಮಾರಸ್ವಾಮಿ ಅವರಿಗೆ ಗುಳೇದಗುಡ್ಡ ಖಣದಿಂದ ಸಿದ್ಧಪಡಿಸಿದ್ದ ಬೃಹದಾಕಾರದ ಹಾರಹಾಕಿ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಕುಂಭಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪಂಚರತ್ನ ಯಾತ್ರೆಯಿಂದ ಚುನಾವಣಾ ರಂಗು ಅನಾವರಣಗೊಂಡಿತು.