ಅಹಂಕಾರ ತಾರಕಕ್ಕೇರಿದಾಗ ಆಗುವ ಅನಾಹುತಗಳಿಗೆ ಅಹಂಕಾರಿಯೇ ಕಾರಣನಾಗುತ್ತಾನೆ ಹೊರತು ಬೇರಾರೂ ಅಲ್ಲ; ಅಹಂಕಾರ ಒಬ್ಬನಿಂದ ಹುಟ್ಟಿದ್ದರೂ ಕೂಡ ಸಾಂಗತ್ಯದಲ್ಲಿದ್ದವರೂ ಕೂಡ ಅವಸಾನ ಹೊಂದುತ್ತಾರೆ. ರಾಮಾಯಣದಲ್ಲಿ ಬಹುಚಂದವಾಗಿಯೇ ಲಂಕಾಯುದ್ಧವನ್ನು ವಿಶ್ಲೇಷಿಸಲಾಗಿದೆ.
ಲಂಕಾಪಟ್ಟಣಕ್ಕೆ ಪ್ರವೇಶಿಸಿದ ಕೂಡಲೇ ಶ್ರೀರಾಮಚಂದ್ರನು ಅಂಗದನನ್ನು ರಾಯಭಾರಿಯನ್ನಾಗಿ ರಾವಣನ ಬಳಿ ಕಳುಹಿಸಿದನು. ಆದರೆ. ಮದೋನ್ಮತ್ತನಾದ ರಾವಣನು ಅಂಗದನ ಮಾತಿಗೆ ಬೆಲೆ ಕೊಡದೇ ಯುದ್ಧಕ್ಕೆ ಸಿದ್ಧನಾದನು. ಇದನ್ನು ತಿಳಿದ ಶ್ರೀರಾಮಚಂದ್ರನು ಲಂಕೆಯ ನಾಲ್ಕುದ್ವಾರಗಳನ್ನು ಕಪಿಸೈನ್ಯಗಳನ್ನು ಕಳುಹಿಸಿ ಮುತ್ತಿಗೆ ಹಾಕಿಸಿದನು.
ರಾವಣನು ಪಶ್ಚಿಮದಿಕ್ಕಿಗೆ ಇಂದ್ರಜಿತ್ತನ್ನೂ ಪೂರ್ವದಿಕ್ಕಿಗೆ ಪ್ರಹಸ್ತನನ್ನು ದಕ್ಷಿಣ ದಿಕ್ಕಿಗೆ ವಜ್ರದಂಷ್ಟ್ರನನ್ನು ಯುದ್ಧಮಾಡಲು ಕಳುಹಿಸಿ, ಉತ್ತರ ದಿಕ್ಕಿಗೆ ತಾನೇ ಹೊರಟನು. ಶ್ರೀರಾಮಚಂದ್ರನು ಇಂದ್ರಜಿತನ ಜೊತೆಗೆ ಯುದ್ಧಮಾಡಲು ಹನುಮಂತನನ್ನು ಕಳುಹಿಸಿದನು. ಪ್ರಹಸ್ತನನ್ನು ಎದುರಿಸಲು ನೀಲನನ್ನು, ವಜ್ರದಂಷ್ಟ್ರನನ್ನು ಎದುರಿಸಲು ಅಂಗದನನ್ನು ನಿಯೋಜನೆ ಮಾಡಿದನು.
ರಾವಣನ ಎದುರು ಯುದ್ಧಮಾಡಲು ಸುಗ್ರೀವನ ಜೊತೆ ತಾನೇ ಹೊರಟನು. ನೀಲ ಹಾಗೂ ವಿಭೀಷಣರು ಪ್ರಹಸ್ತನನ್ನು ಸಂಹಾರಮಾಡಿದರು. ಅಂಗದನು ವಜ್ರದಂಷ್ಟ್ರನನ್ನು ಬೀಳಿಸಿದನು. ಶಿವವರದಿಂದ ಅವಧ್ಯರಾದ ಧೂಮ್ರನೇತ್ರ ಹಾಗೂ ಅಕಂಪನರೆಂಬ ರಾಕ್ಷಸರು ಹನುಮಂತನಿಂದ ಸತ್ತು ಹೋದರು. ರಾತ್ರಿಯ ಕಾಲದಲ್ಲಿ ಕಪಿಗಳು ಪುನಃ ರಾಮನ ಅಪ್ಪಣೆಯಂತೆ ಲಂಕೆಯನ್ನು ಸುಟ್ಟುಹಾಕಿದರು.
ಮರುದಿವಸ ಕುಂಭಕರ್ಣನ ಮಕ್ಕಳಾದ ನಿಕುಂಭ ಹಾಗೂ ಕುಂಭ ಎಂಬೀರ್ವರು ಘೋರ ಯುದ್ಧವನ್ನು ಮಾಡಲು ಪ್ರಾರಂಭ ಮಾಡಿದರು. ಆದರೆ. ಸುಗ್ರೀವನು ಆ ಕುಂಭನನ್ನು ಸಂಹಾರ ಮಾಡಿದನು. ಇದರಿಂದ ಸಿಟ್ಟುಕೊಂಡ ನಿಕುಂಭನು ಹನುಮಂತನನ್ನು ಎತ್ತಿ ಹೆಗಲ ಮೇಲಿಟ್ಟುಕೊಂಡು ಓಡಿಹೋಗಲು ಪ್ರಾರಂಭ ಮಾಡಿದನು. ಆಗ ಹನುಮಂತನು ನಿಕುಂಭನ ಕತ್ತನ್ನು ಹಿಡಿದು ಜೋರಾಗಿ ಒತ್ತಿದರೆ ನೆಲದಲ್ಲಿ ಬಿದ್ದು ಸತ್ತೇ ಹೋದನು. ಆಗ ಶ್ರೀರಾಮಚಂದ್ರನು ಬ್ರಹ್ಮವರದಿಂದ ಅವಧ್ಯರಾದ ಸುಪ್ತಘ್ನ, ಯಜ್ಞಕೋಪ, ಶಕುನಿ, ದೇವತಾಪನಿ, ವಿದ್ಯುಜ್ಜಿಹ್ವ ಪ್ರಮಾಥಿ, ಶುಕ, ಸಾರಣ ಎಂಬ ರಾಕ್ಷಸರನ್ನು ತನ್ನ ಬಾಣದಿಂದ ಕೊಂದನು.
ರಾವಣ ಮಕ್ಕಳ ಸಂಹಾರ: ರಾವಣನಿಗೆ ದೇವಾಂತಕ ನರಾಂತಕ, ತ್ರಿಶಿರ, ಅತಿಕಾಯರೆಂದ ನಾಲ್ವ ಮಂದಿ ಮಕ್ಕಳಿದ್ದರು. ಇವರಲ್ಲಿ ನರಾಂತಕನು ಅಂಗದನಿಂದ ಸತ್ತು ಹೋದನು. ದೇವಾಂತಕ ಹಾಗೂ ತ್ರಿಶಿರ ಇಬ್ಬರು ಹನುಮಂತನಿಂದ ಸತ್ತರು. ಅತಿಕಾಯನ ಜೊತೆ ಲಕ್ಷ್ಮಣನು ಯುದ್ದ ಮಾಡಿ ಅವರ ತಲೆಯನ್ನು ಹಾಗೂ ತೋಳುಗಳನ್ನು ಕತ್ತರಿಸಿದನು. ಆದರೆ, ಇವನು ಸಾಯಲಿಲ್ಲ. ಕೂಡಲೇ ಎರಡು ತಲೆ ಚಿಗುರಿದವು. ನಾಲ್ಕು ಭುಜಗಳು ಹುಟ್ಟಿಕೊಂಡವು. ಪುನಃ ಅವುಗಳನ್ನು ಕತ್ತರಿಸಿದನು. ನಾಲ್ಕು ತಲೆ ಎಂಟು ಭುಜಗಳು ಚಿಗುರಿದವು. ಆಗ ವಾಯುದೇವರ ಮಾರ್ಗದರ್ಶನದಂತೆ ಲಕ್ಷ್ಮಣನು ಬ್ರಹ್ಮಾಸ್ತ್ರವನ್ನು ಅತಿಕಾಯನ ಮೇಲೆ ಪ್ರಯೋಗ ಮಾಡಿದಾಗ ಅಂತಿಮವಾಗಿ ಕೊನೆ ಉಸಿರು ಬಿಟ್ಟನು. ಅತಿಕಾಯನು ಸತ್ತ ಬಳಿಕ ಹಿಂದೆ ದಣಕಾರಣ್ಯದಲ್ಲಿ ಸತ್ತಿದ್ದ ಖರನ ಮಗನಾದ ಮಕರಾಕ್ಷನು ಅದೇ ಶ್ರೀರಾಮನಿಂದ ಸತ್ತು ಹೋದನು.