ಬಾಗಲಕೋಟೆ: ಮದ್ಯಪಾನ ಸಂಯಮ ಮಂಡಳಿಯಿಂದ ೨೦೨೧ ಹಾಗೂ ೨೦೨೨ನೇ ಸಾಲಿನ ಸಂಯಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ೨೦೨೧ನೇ ಸಾಲಿನ ಪ್ರಶಸ್ತಿಯನ್ನು ಬೀದರ್ ಜಿಲ್ಲೆ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು ಹಾಗೂ ೨೦೨೨ನೇ ಸಾಲಿನ ಮೈಸೂರಿನ ಬಸವ ಮಾರ್ಗ ಪ್ರತಿಷ್ಠಾನದ ಮುಖ್ಯಸ್ಥ ಎಸ್. ಬಸವರಾಜು ಅವರಿಗೆ ಜ. ೧೮ರಂದು ಇಳಕಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಬಸವಣ್ಣೆಪ್ಪ ತುಬಾಕಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಶಸ್ತಿ ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ. ಪ್ರಶಸ್ತಿಗೆ ಪ್ರೇರಣೆಯಾದ ಇಳಕಲ್ಲಿನ ಮಹಾಂತಶ್ರೀಗಳ ನೆಲೆಸಿದ ತಾಣದಲ್ಲೇ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿ ಜ. ೧೮ರ ಬೆಳಗ್ಗೆ ೧೦.೩ಕ್ಕೆ ಇಳಕಲ್ಲಿನ ಶ್ರೀವಿಜಯಮಹಾಂತೇಶ ಶಿವಯೋಗಿಗಳ ಅನುಭವ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಪ್ರಶಸ್ತಿಯು ತಲಾ ಒಂದು ಲಕ್ಷ ರೂ.ಗಳ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.