ಬಳ್ಳಾರಿ: ಗಡಗಿ ಚೆನ್ನಪ್ಪ ವೃತ್ತದ ಗಡಿಯಾರ ಗೋಪುರ ನೆಲಸಮ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಳ್ಳಾರಿ ನಗರ ಶಾಸಕ, ಬಿಜೆಪಿಯ ಜಿ. ಸೋಮಶೇಖರ ರೆಡ್ಡಿ ಕಾಂಗ್ರೆಸ್ನವರು ಈ ವಿಷಯದಲ್ಲಿ ಡಬಲ್ ಗೇಮ್ ಆಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬುಧವಾರ ಬೆಳಗ್ಗೆ ಗಡಗಿ ಚೆನ್ನಪ್ಪ ವೃತ್ತದಲ್ಲಿಯೇ ಹಳೆಯ ಗಡಿಯಾರ ಗೋಪುರ ತೆರವುಗೊಳಿಸಿ, ಹೊಸ ಗೋಪುರ ನಿರ್ಮಾಣಕ್ಕೆ ಪಾಲಿಕೆಯ ಆಯುಕ್ತರು ನೀಡಿದ ಯಾವುದೇ ಅಭ್ಯಂತರ ಇಲ್ಲ ಎಂಬ ಪ್ರಮಾಣ ಪತ್ರ, ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ನಕಲು ಪ್ರತಿ, ರಾಷ್ಟ್ರೀಯ ಹೆದ್ದಾರಿ ನೀಡಿದ ಅನುಮತಿ ಪತ್ರ ಪ್ರದರ್ಶಿಸಿ, ಮಾತನಾಡಿದ ಅವರು, ಈ ಹಿಂದೆ ಆಂಧ್ರ ಮುಖ್ಯಮಂತ್ರಿ ಸಂಜೀವ ರೆಡ್ಡಿ, ಕರ್ನಾಟಕದ ಮುಖ್ಯಮಂತ್ರಿ ನಿಜಲಿಂಗಪ್ಪನವರು ಇದ್ದಾಗ ಈ ಗೋಪುರ ಕಟ್ಟಲಾಗಿತ್ತು. ನಂತರ ಜನಾರ್ಧನ ರೆಡ್ಡಿ ಸಚಿವರಾದ ನಂತರ ಹೊಸ ಗೋಪುರ ನಿರ್ಮಾಣ ಕುರಿತು ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಯಿತು. ಅದರಂತೆ ನಿರ್ಮಾಣ ಮಾಡಲು ಮುಂದಾಗಿದ್ದೆವು. ಆದರೆ, ಆಗಿರಲಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಸಣ್ಣದೊಂದು ಗೋಪುರ ನಿರ್ಮಾಣ ಮಾಡಿದ್ದರು. ಅದರ ಬದಲು ದೊಡ್ಡ ಗೋಪುರ ನಿರ್ಮಾಣ ಮಾಡಿ, ಮಹಾನಗರ ಪಾಲಿಕೆಯ ಸೌಂದರ್ಯಕ್ಕೆ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಹೊಸ ಗೋಪುರ ನಿರ್ಮಿಸಲಾಗುತ್ತಿದೆ ಎಂದರು.