ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಧಾವಿಸುತ್ತಿರುವ ವಿದ್ಯಾರ್ಥಿಗಳ ಗುಂಪು

ಸಮಾರಂಭಕ್ಕೆ ದಂಡು
Advertisement

ಹುಬ್ಬಳ್ಳಿ : 26 ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಸಮಾರಂಭ ಇಲ್ಲಿನ ರೈಲ್ವೆ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಆನ್ ಲೈನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು, ಯುವಕರು ಧಾವಿಸುತ್ತಿದ್ದಾರೆ.
ಮಧ್ಯಾಹ್ನ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ನೆರವೇರಿಸಲಿದ್ದು, ವೇದಿಕೆಯಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು, ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಒಟ್ಟು 21 ಜನರು ಆಸೀನರಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕಿಂತ ಹೆಚ್ಚು ಯುವಕರು ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇದರಲ್ಲಿ ಹೊರ ರಾಜ್ಯದಿಂದ ಯುವಜನೋತ್ಸವಕ್ಕೆ ಆಗಮಿಸಿದ ಏಳುವರೆ ಸಾವಿರ ಯುವಕರೂ ಸೇರಿದ್ದಾರೆ.
ಪ್ರಧಾನಿ ಆನ ಹಿನ್ನೆಲೆಯಲ್ಲಿ ಸಂಪೂರ್ಣ ಬಿಗಿ ಬಂದೋಬಸ್ತ್ ನ್ನು ಎಡಿಜಿಪಿ ಅಲೋಕಕುಮಾರ ನೇತೃತ್ವದಲ್ಲಿ ಪೊಲೀಸರು ಕೈಗೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಮಧ್ಯಾಹದನ 3.30 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಗೋಕುಲ ರಸ್ತೆ, ಹೊಸೂರು ವೃತ್ತ, ಕಾಟನ್ ಮಾರ್ಕೆಟ್, ಹಳೆ ಕೋರ್ಟ್ ವೃತ್ತದಿಂದ ರೈಲ್ವೆ ಮೈದಾನಕ್ಕೆ ತೆರಳಲಿದ್ದಾರೆ. ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ಒಟ್ಟ 8 ಕಿ.ಮೀ ದೂರ ಇದ್ದು, ಪ್ರಧಾನಿಯವರು ಸಾಗುವ ಮಾರ್ಗದಲ್ಲಿ ಪ್ರತಿ 1 ಕಿ.ಮೀ ಒಂದು ಕಡೆ ಪ್ರಧಾನಿ ಜನರನ್ನು ಭೇಟಿ ಮಾಡಿ ಅವರ ಭಾವನೆಗೆ ಸ್ಪಂದಿಸಲಿದ್ದಾರೆ.
ಅಲ್ಲದೇ, ಪಾಲಿಕೆಯ ಬಿಜೆಪಿ ಸದಸ್ಯರು, ಮುಖಂಡರ ನೇತೃತ್ವದಲ್ಲಿ ನಾಲ್ಕು ಕಡೆ ಪ್ರಧಾನಿಯವರನ್ನು ಸ್ವಾಗತಿಸಲು ತಂಡಗಳನ್ನು ರಚಿಸಲಾಗಿದೆ.
ವೇದಿಕೆ ಪರಿಶೀಲಿಸಿದ ಕೇಂದ್ರ ಸಚಿವರು : ಉದ್ಘಾಟನೆ ಸಮಾರಂಭ ನಡೆಯುವ ವೇದಿಕೆ, ಸಭಿಕರು ಆಸೀನರಾಗುವ ಸ್ಥಳ, ದ್ವನಿವರ್ಧಕ, ಗಣ್ಯರು, ಅತೀ ಗಣ್ಯರು ಅಸೀನರಾಗುವ ಸ್ಥಳಗಳು ಸೇರಿದಂತೆ ಕಾರ್ಯಕ್ರಮ ಸಿದ್ದತೆಗಳನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಯುವ ಸಬಲೀಕರಣ ಸಚಿವ ನಾರಾಯಣಗೌಡ ಅವರು ಪರಿಶೀಲಿಸಿದರು. ಶಾಸಕ ಅರವಿಂದ ಬೆಲ್ಲದ ಇದ್ದರು.
ದೂರ ಉಳಿದ ಜಗದೀಶ ಶೆಟ್ಟರ !
ಕಾರ್ಯಕ್ರಮ ನಡೆಯುವ ರೈಲ್ವೆ ಮೈದಾನ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಡರ ಅವರ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅವರ ಗೈರು ಹಾಜರಾತಿ ಎದ್ದು ಕಂಡಿತು.
ಮೂರು ದಿನಗಳ ಹಿಂದೆ ಶೆಟ್ಟರ್ ಅವರೇ ರೈಲ್ವೆ ಮೈದಾನದಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ದರು. ಆದರೆ, ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಲ್ಲ ಎಂಬುದು, ವೇದಿಕೆಯಲ್ಲಿ ಕುಳಿತುಕೊಳ್ಳಲು ಅವರಿಗೆ ಅವಕಾಶ ಇಲ್ಲ ಎಂಬ ವಿಷಯ ತಿಳಿದ ಬಳಿಕ ದೂರ ಉಳಿದಿದ್ದರು.
ಲೋಪ ಸರಿಪಡಿಸಲಾಗಿದೆ. ಜಗದೀಶ ಶೆಟ್ಟರ ಸೇರಿದಂತೆ ಎಲ್ಲ ಶಾಸಕರೂ ವೇದಿಕೆಯಲ್ಲಿರುತ್ತಾರೆ ಎಂದು ಕೇಂದ್ರ ಸಚಿವ ಜೋಶಿ ಅವರು ಬುಧವಾರ ರಾತ್ರಿ ಸ್ಪಷ್ಟಪಡಿಸಿದ್ದರು. ಆದಾಗ್ಯೂ ಶೆಟ್ಟರ ಮುನಿಸು ಕಡಿಮೆ ಆಗಿಲ್ಲ ಎಂಬುದು ಗುರುವಾರ ಮಧ್ಯಾಹ್ನದವರೆಗೂ ಅವರು ವೇದಿಕೆಯತ್ತ ಸುಳಿಯದಿರುವುದರಿಂದ ತಿಳಿಯುತ್ತದೆ.