ಧಾರವಾಡ: ಭಿಕ್ಷುಕಿಯೊಬ್ಬಳನ್ನು ಬೀದಿ ನಾಯಿಗಳು ಎಳೆದಾಡಿ ಕೊಂದು ಹಾಕಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸಂಭವಿಸಿದೆ.
ಉಪ್ಪಿನ ಬೆಟಗೇರಿಯ ಖಬರಸ್ತಾನ್ ಬಳಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಭಿಕ್ಷುಕಿ ಖಬರಸ್ತಾನ್ ಬಳಿ ಮಲಗಿಕೊಂಡಿದ್ದ ವೇಳೆ ಸುಮಾರು 15-20 ಬೀದಿ ನಾಯಿಗಳು ಆಕೆಯ ಮೇಲೆ ಏಕಾಏಕಿ ದಾಳಿ ಮಾಡಿವೆ. ಅಲ್ಲದೇ ಆಕೆಯನ್ನು ಎಳೆದಾಡಿ ತೊಡೆ, ಕೈಗಳಿಗೆ ಬಲವಾಗಿ ಕಚ್ಚಿ ಗಾಯ ಮಾಡಿವೆ. ಇದರಿಂದ ಆ ಭಿಕ್ಷುಕಿ ಸ್ಥಳದಲ್ಲೇ ಅಸುನೀಗಿದ್ದಾಳೆ. ಸಾವನ್ನಪ್ಪಿದ ಮಹಿಳೆಯ ಹೆಸರು, ವಿಳಾಸ ತಿಳಿದುಬಂದಿಲ್ಲ.
ಘಟನೆಯನ್ನು ನೋಡಿದ ಸ್ಥಳೀಯರು ಗರಗ ಠಾಣೆ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ರೀತಿ ಭಿಕ್ಷುಕಿ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಬೀದಿ ನಾಯಿಗಳ ಹಾವಳಿ ತಡೆಗಟ್ಟಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.