ಬೆಂಗಳೂರು: ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ. ಸುನೀಲ್ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಕಾರ್ಕಳದ ಇಬ್ಬರು ಸ್ಥಳೀಯ ಮುಖಂಡರಿಗೆ ಬೆಂಗಳೂರಿನ ೧೨ನೇ ಸಿಟಿ ಸಿವಿಲ್ ನ್ಯಾಯಾಲಯ ದಂಡ ವಿಧಿಸುವ ಜತೆಗೆ ಬಹಳ ಬೇಷರತ್ ಕ್ಷಮೆಯಾಚನೆಗೆ ಸೂಚಿಸಿದೆ.
ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಕಾರ್ಕಳದ ಯೋಗೇಶ್ ನಯನಾ ಇನ್ನಾ ಹಾಗೂ ರಾಧಾಕೃಷ್ಣ ನಾಯಕ್ ಎಂಬುವರು ಸುನೀಲ್ಕುಮಾರ್ ವಿರುದ್ಧ ಫೇಸಬುಕ್ ಹಾಗೂ ಇತರೆ ಜಾಲತಾಣದಲ್ಲಿ ಅವಹೇಳನಕಾರಿ, ಸುಳ್ಳು ಹಾಗೂ ದುರುದ್ದೇಶಪೂರಿತ ಬರಹವನ್ನು ಪ್ರಕಟಿಸಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋದ ಸುನೀಲ್ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳು ಬೇಷರತ್ ಕ್ಷಮೆಯಾಚಿಸುವ ಜತೆಗೆ ತಲಾ 25 ಸಾವಿರ ರೂ. ದಂಡ ಸಲ್ಲಿಸಬೇಕು. ಜತೆಗೆ ಆಧಾರ ರಹಿತ, ಅಪ್ರಮಾಣಿಕೃತ, ದುರುದ್ದೇಶಪೂರಿತ ಬರಹಗಳನ್ನು ಜಾಲತಾಣದಲ್ಲಿ ಪ್ರಕಟಿಸದಂತೆ ಪ್ರತಿಬಂಧ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಸುನೀಲ್ಕುಮಾರ್, “ನನ್ನ ವಿರುದ್ಧ ಜಾಲಾತಾಣದಲ್ಲಿ ಕೆಲವರು ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದೆ. ಈಗ ನನ್ನ ಪರ ತೀರ್ಪು ಬಂದಿದೆ. ಮಾನಹಾನಿಕಾರಿ ಬರಹಗಳನ್ನು ಜಾಲತಾಣದಲ್ಲಿ ಪ್ರಕಟಿಸುವವರಿಗೆ ಇದೊಂದು ಪಾಠ” ಎಂದು ಹೇಳಿದ್ದಾರೆ.