ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗ ಸೇರಿ ರಾಜ್ಯದ ಆಯ್ದ 25 ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮಾಜದ ವಿವಿಧ ರಾಜಕೀಯ ಪಕ್ಷಗಳ ಆಕಾಂಕ್ಷಿಗಳಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿ ತರಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ ಎಲ್ಲ ರಾಜಕೀಯ ಪಕ್ಷಗಳ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಈ ಭಾಗದಲ್ಲಿ ಕೆಲ ವರ್ಷಗಳ ಹಿಂದಿನಿಂದಲೂ ವಿಪ್ರ ಸಮುದಾಯದ ನಾಯಕರು ಶಾಸಕರಾಗಿ, ಎಂಎಲ್‌ಸಿಗಳಾಗಿ, ಸಂಸದರು, ಸಚಿವರಾಗಿ ಸಾರ್ವಜನಿಕ ಸೇವೆ ಸಲ್ಲಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಬ್ರಾಹ್ಮರಣನ್ನು ವೋಟ್ ಬ್ಯಾಂಕ್‌ನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಹೊರತು ರಾಜಕೀಯ ಸ್ಥಾನಮಾನ ಕಲ್ಪಿಸುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ವಿಪ್ರರು ಒಂದು ಲಕ್ಷ ಜನರಿದ್ದು, ಅದರಲ್ಲೂ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ 35-40 ಸಾವಿರ ಮತದಾರರು ನಿರ್ಣಾಯಕರಾಗಿದ್ದಾರೆ. ಹೀಗಾಗಿ, ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಕೃಷ್ಣಾಜೀ ಕುಲಕರ್ಣಿ, ಬಿಜೆಪಿಯಿಂದ ರಾಘವೇಂದ್ರ ಕುಲಕರ್ಣಿ ಕೋಗನೂರ, ರಾಯಚೂರಿನಿಂದ ನಾರಾಯಣರಾವ್ ಆಕಾಂಕ್ಷಿಗಳಾಗಿದ್ದಾರೆ. ಜಮಖಂಡಿ ಕ್ಷೇತ್ರದಿಂದ ಶ್ರೀಕಾಂತ ಕುಲಕರ್ಣಿ, ಬೆಳಗಾವಿ ಜಿಲ್ಲೆಯ ರಾಮದುರ್ಗ ಕ್ಷೇತ್ರದಿಂದ ರಮೇಶ ದೇಶಪಾಂಡೆ, ಧಾರವಾಡ ಕ್ಷೇತ್ರದಿಂದ ದೀಪಕ ಚಿಂಚೂರೆ, ಹಳಿಯಾಳದಿಂದ ಆರ್.ವಿ. ದೇಶಪಾಂಡೆ, ತಿಪಟೂರಿನಿಂದ ಬಿ.ಸಿ. ನಾಗೇಶ, ಯಲ್ಲಾಪುರದಿಂದ ಶಿವರಾಮ್ ಹೆಬ್ಬಾರ, ಮೈಸೂರಿನ ಕೆ.ಆರ್. ಕ್ಷೇತ್ರದಿಂದ ಎಸ್.ಎ. ರಾಮದಾಸ, ಶಿವಮೊಗ್ಗ, ಉಡುಪಿ, ಮಂಗಳೂರು, ಬೆಂಗಳೂರಿನ ಮಲ್ಲೇಶ್ವರಂ, ಬಸವನಗುಡಿ, ರಾಜಾಜಿ ನಗರ ಸೇರಿ 25 ಕ್ಷೇತ್ರಗಳಲ್ಲಿ ವಿಪ್ರ ಸಮುದಾಯದ ರಾಜಕೀಯ ನಾಯಕರಿಗೆ ಟಿಕೆಟ್ ನೀಡಲೇಬೇಕು ಎಂದು ಮನವಿ ಮಾಡಿದರು. ಈಗಾಗಲೇ ರಾಜಕೀಯ ಪಕ್ಷಗಳ ವರಿಷ್ಠರಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿ ಪತ್ರ ಮುಖೇನ ಟಿಕೆಟ್ ನೀಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್, ಪ್ರಮುಖರಾದ ಭಾನುಪ್ರಕಾಶ, ಭೀಮಸೇನರಾವ ಮಾಡ್ಯಾಳಕರ್, ರಾಘವೇಂದ್ರ ನೀಲೂರ, ಪ್ರಶಾಂತ ಕೋರಳ್ಳಿ, ನರಹರಿ ಪಾಟೀಲ್, ರಾಘವೇಂದ್ರ ಕುಲಕರ್ಣಿ ಕೋಗನೂರ, ವೀರೇಶ ಕುಲಕರ್ಣಿ, ಪವನ ಫಿರೋಜಾಬಾದ್ ಮತ್ತಿತರರಿದ್ದರು.