ದೇವರ ದರ್ಶನ ಪಡೆದು ಇನ್ನೇನು 10 ಕಿ.ಮೀ. ದೂರ ಕ್ರಮಿಸಿದರೆ ಮನೆ ಸೇರುತ್ತಿದ್ದ ಮಕ್ಕಳು ಮಸಣ ಸೇರಿದರು. ಭೀಕರ ಅಪಘಾತದಲ್ಲಿ ಸಿಲುಕಿ ಮೂವರು ದರ್ಮರಣ ಹೊಂದಿದ ಹೃದಯ ವಿದ್ರಾವಕ ಘಟನೆ ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮುಧೋಳ ತಾಲೂಕಿನ ಕುಳಲಿ ಕ್ವಾರಿ ಬಳಿ ನಡೆದಿದೆ. ಘಟನೆಗೆ ಸಮೀಪದ ನಾವಲಗಿ ಗ್ರಾಮದ ಜನತೆ ಮಮ್ಮಲ ಮರಗುವಂತಾಗಿ ಎಲ್ಲೆಂದರಲ್ಲಿ ನೀರವ ಮೌನ ಸುತ್ತುವರೆದಿತ್ತು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದ ಹಣಮಂತ ಬೂಮಕ್ಕನವರ(22), ಗೋವಿಂದಪ್ಪ ಪಾಟೀಲ(21), ಸದಾಶಿವ ಪಾಟೀಲ(16) ಎಂಬಾತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಇನ್ನುಳಿದ 10ಕ್ಕೂ ಅಧಿಕ ಜನರಿಗೆ ತೀವ್ರ ಗಾಯಗಳಾಗಿ, ಮುಧೋಳ ಹಾಗೂ ಬಾಗಲಕೋಟೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಇಂದು 6 ಜನ ಚಿಕಿತ್ಸೆ ಪಡೆದು ಮನೆಗೆ ತೆರಳಿದರೆ, ಇನ್ನೂ ನಾಲ್ವರಲ್ಲಿ ಇಬ್ಬರು ಮುಧೋಳ ಹಾಗೂ ಇಬ್ಬರು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಮೂಹಿಕ ಅಂತ್ಯ ಸಂಸ್ಕಾರ:
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶುಕ್ರವಾರ ರಾತ್ರಿ 9ಗಂಟೆ ಸುಮಾರಿಗೆ ಮೂವರ ಮೃತದೇಹವನ್ನು ಗ್ರಾಮಕ್ಕೆ ತಂದು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಯಿತು. ಇಡೀ ನಾವಲಗಿ ಗ್ರಾಮದ ಜನತೆ ಕಣ್ಣೀರಿನಿಂದ ಕೂಡಿತ್ತು. ಒಂದೆಡೆ ಸಾವಿನ ಸುದ್ದಿಯಾದರೆ ಮತ್ತೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಸ್ಥರ ಮುಖದಲ್ಲಿ ಆತಂಕ ಹೆಚ್ಚಾಗುವಲ್ಲಿ ಕಾರಣವಾಗಿತ್ತು.