ಕನ್ನಡ ಮನಸ್ಸುಗಳು ಇಚ್ಛಾಶಕ್ತಿ ಇರುವವರಿಗಾಗಿ ಕಾಯುತ್ತಿವೆ..

ಜನಾಶಯ
Advertisement

ನುಡಿ ಹಬ್ಬಕ್ಕೆ ಆಗಮಿಸುವಂತೆ ಸಂತರ- ಶರಣರ ನಾಡು ಹಾವೇರಿ ಆಹ್ವಾನಿಸುತ್ತಿದೆ. ನಾಳೆ ಇಷ್ಟೊತ್ತಿಗೆ ಕನ್ನಡ ಮನಸ್ಸುಗಳು ನಾಡ ನುಡಿಯ ಅಭ್ಯುದಯ, ಆಶಯ ಹೊತ್ತು ಈ ಹಬ್ಬದ ಮನಸ್ಸು ಅರಳಿಸಿಕೊಳ್ಳುತ್ತವೆ. ಎಂಬತ್ತಾರನೇ ಕನ್ನಡ ಸಾಹಿತ್ಯ ಸಮ್ಮೇಳನವಿದು.
ಇಂದಿನ ಹಾವೇರಿ ವಾತಾವರಣ ನೋಡಿದರೆ ಇದೊಂದು ಜಾತ್ರೆ ಎನ್ನಿ, ಸಂತೆ, ಸಮಾವೇಶ, ಸಮಾರಾಧನೆ ಎನ್ನಿ ಎಲ್ಲವೂ ಆಗಲಿದೆ.. ಅಂದರೆ, ಈ ಹಿಂದಿನ ಸಮ್ಮೇಳನಗಳಿಗಿಂತ ಭಿನ್ನವಾಗಿ ಜರುಗಲಿಕ್ಕಿಲ್ಲವಾದರೂ. ಒಟ್ಟಾರೆ ಪ್ರಯೋಜನವಾಗುವುದು ಕನ್ನಡಕ್ಕೆ ಎನ್ನುವುದರಲ್ಲಿ ಸಂಶಯವಿಲ್ಲ.
ನುಡಿ ಹಬ್ಬಗಳು ಭಾಷೆ-ಬೆಳವಣಿಗೆ, ಕನ್ನಡಿಗರ ಸ್ವಾಭಿಮಾನ, ಕಿಚ್ಚು, ಒಗ್ಗಟ್ಟು, ಹುಟ್ಟಿಸುವಲ್ಲಿ ಯಶಸ್ವಿಯಾಗುತ್ತದೆ ಎನ್ನುವ ಆಶಯ ಸಂಯೋಜಕರದ್ದು, ಸಂಘಟಕರದ್ದು. ಹಾಗೂ ಇಷ್ಟು ಸಮ್ಮೇಳನ ನಡೆಸಿಕೊಂಡು ಬಂದ ಕನ್ನಡ ಸಾಹಿತ್ಯ ಪರಿಷತ್ತಿನದೂ ಕೂಡ.
ಭಾಷೆ ಅನ್ನ ನೀಡಬೇಕು. ನೆಲ-ಜಲ ರಕ್ಷಿಸಬೇಕು. ಎಲ್ಲ ಮನಸ್ಸುಗಳು ಒಂದಾಗಬೇಕು ಎನ್ನುವ ಅಭಿಲಾಷೆ-ಆಶಯ ನಿಜವಾದರೂ, ಸಾಫಲ್ಯ ಸಾಧಿಸಿದ್ದು ಅಷ್ಟಕ್ಕಷ್ಟೇ. ವಿಶ್ವ ಈಗ ಚಿಕ್ಕದಾಗಿ, ಸಂವಹನ ಹಾಗೂ ಉದ್ಯೋಗ ಬಹುರಾಷ್ಟ್ರೀಯ ಆಗಿರುವಾಗ, ಅಡುಗೆ ಮನೆಯವರೆಗೆ ಅನ್ಯ ಭಾಷೆಗಳು ಪ್ರವೇಶಿಸಿದೆ. ಮಾತೃಭಾಷೆಯನ್ನು ನವಪೀಳಿಗೆ ಮರೆತಿರುವ ಈ ಸ್ಥಿತಿಯಲ್ಲಿ ನುಡಿ ಸಂಸ್ಕೃತಿ ಉಳುವಿಗೆ ಕಂಡುಕೊಳ್ಳುವ ಯತ್ನ ಇಂತಹ ಸಮ್ಮೇಳನಗಳಿಂದ ನಡೆಯುತ್ತದಷ್ಟೇ.
ಎಂಬತ್ತೈದು ಸಮ್ಮೇಳನಗಳ ನಿರ್ಣಯ, ಅದರ ಗೋಷ್ಠಿಗಳು, ಆಶಯಗಳೆಲ್ಲ ಎಂಬತ್ತಾರನೇ ಸಮ್ಮೇಳನದಲ್ಲೂ ಮುಂದುವರಿಯುವುದರಿಂದ ಹಾಗೂ ಇನ್ನೂ ಹದಿನಾಲ್ಕು ಸಮ್ಮೇಳನಗಳು ಜರುಗಿದರೂ(ನೂರನೇ ಸಮ್ಮೇಳನ) ಅವೇ ವಿಷಯಗಳು- ನಿರ್ಧಾರಗಳು ನಿಶ್ಚಿತವಾಗಿ ಮುಂದುವರಿಯುವುತ್ತವೆಂದರೆ ತಪ್ಪಾಗಲಿಕ್ಕಿಲ್ಲ.
ಜನಸಾಮಾನ್ಯ, ವಿಶೇಷವಾಗಿ ನಾಡಿನ ಯುವ ಪೀಳಿಗೆ ಹಾಗೂ ಭಾಷೆ ಉಳಿಸಿಕೊಳ್ಳಬೇಕು ಎನ್ನುವ ಕಳಕಳಿಯ ಮನಸ್ಸುಗಳು ಈ ಹಿಂದಿನಿಂದಲೂ ಇಟ್ಟ ಒಂದೇ ಪ್ರಶ್ನೆ, ಇದು (ಕನ್ನಡ) ಅನ್ನ ನೀಡುತ್ತದೆಯೇ'? ಅಂದರೆ ಉದ್ಯೋಗ-ವ್ಯವಹಾರ-ಬದುಕು ನೀಡುತ್ತದೆಯೇ ಎನ್ನುವುದು. ಕಳೆದ ಹದಿನೈದು ವರ್ಷಗಳಿಂದೀಚೆಗೆ ಕನ್ನಡಿಗರ ಒತ್ತಾಸೆ-ಒಕ್ಕಟ್ಟುಗಳು ನೆಲ, ಜಲ, ಸಂಸ್ಕೃತಿ ರಕ್ಷಣೆಗಾಗಿ ಸಾಕಷ್ಟು ಕನ್ನಡ ಪರ ಹೋರಾಟಗಳು ಸಾಕಷ್ಟು ನಡೆದಿವೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆದುಕೊಳ್ಳಲು ೨೦೦೪ರಿಂದ ೨೦೦೮ರವರೆಗೆ ನಿರಂತರ ಹೋರಾಟಗಳೇ ನಡೆದವು. ಅಂತೂ ೨೦೦೮, ಅಕ್ಟೋಬರ್ ೩೧ರಂದು ಕನ್ನಡ, ತೆಲುಗು ಎರಡೂ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನವನ್ನೇನೋ ನೀಡಲಾಯಿತು. ಅಂದಿನ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರವೂ ಇದಕ್ಕೆ ಕಾರಣವೆನ್ನಿ. ಇಷ್ಟಾಗಿಯೂ ಶಾಸ್ತ್ರೀಯ ಸ್ಥಾನಮಾನದ ನಂತರ ಭಾಷಾಭಿವೃದ್ಧಿಗೆ ಸರ್ಕಾರ ಮಾಡಿದ ಕಾರ್ಯವೇನು? ಕನ್ನಡದಉದ್ಧಾಮಿ’ಗಳು ನೀಡಿದ ಸಲಹೆ ಏನು? ಆಗಬೇಕಾದದ್ದು ಏನು ಎನ್ನುವುದು ಈಗ ಜಿಜ್ಞಾಸೆಯ ವಿಷಯವಾಗಿ ಉಳಿದಿದೆ.
ಕನ್ನಡಕ್ಕೆ ನೀಡಿದ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ತಮಿಳುನಾಡಿನ ಗಾಂಧಿ ಎಂಬಾತ ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ, ೨೦೧೬ರಲ್ಲಿ ಅಂತೂ ಅದು ತಿರಸ್ಕೃತವಾಯಿತು. ಅಲ್ಲಿಯವರೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಅನುಗುಣವಾಗಿ ಏನಾದರೂ ಯೋಜನೆ ರೂಪಿಸಲು ನ್ಯಾಯಾಲಯದ ಕಡೆಗೆ ಬೆರಳು ತೋರಿಸುತ್ತಿದ್ದ ಸರ್ಕಾರ, ೨೦೧೬ರ ನಂತರವೂ ಒಂದಿಲ್ಲೊಂದು ನೆಪ ಹೇಳಿಕೊಂಡೇ ಬಂತು.
ತಮಿಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡುವಾಗ (೨೦೦೪), ಭಾಷೆಯ ಆಭಿವೃದ್ಧಿ ಯೋಜನೆ ರೂಪಿಸಲು ಸ್ವಾಯತ್ತತೆ ನೀಡಲಾಗಿತ್ತು. ಕನ್ನಡ ಮತ್ತು ತೆಲುಗಿಗೆ ಸ್ವಾಯತ್ತತೆ ನೀಡಿಲ್ಲ ಎನ್ನುವ ಅಂಶ ಬೆಳಕಿಗೆ ಬಂತು. ಈ ಸಂಬಂಧ ಸಂಸತ್ತಿನಲ್ಲಿ ಕನ್ನಡ ಪರ ಧ್ವನಿ ಎತ್ತಲಾಯಿತು. ಸ್ವಾಯತ್ತತೆಯ ಸ್ಥಾನಮಾನ ಕನ್ನಡಕ್ಕೆ ನೀಡಲೇನಡ್ಡಿ ಎನ್ನುವ ಪ್ರಶ್ನೆಗೆ ನಕಾರಾತ್ಮಕ ಉತ್ತರ ಬರಲಿಲ್ಲ. ಆದರೆ ಆದೇಶವೂ ಕನ್ನಡ ಪರ ಬರಲಿಲ್ಲ.
ಅದೇ ರೀತಿ ಶಾಸ್ತ್ರೀಯ ಭಾಷೆಯ ಘೋಷಣೆಯ ನಂತರ ಕೇಂದ್ರ ಸರ್ಕಾರ ನೀಡಿರುವುದು ಕೇವಲ ವರ್ಷಕ್ಕೊಂದು ಕೋಟಿ ರೂಪಾಯಿ. ಅದೂ ಬಳಕೆಯಾಗಿಲ್ಲ. ಘೋಷಣೆಯಾದ ವರ್ಷ ರಾಜ್ಯ ಸರ್ಕಾರ ೨೨ ಕೋಟಿ ಆಯವ್ಯಯದಲ್ಲಿ ತೋರಿಸಿದರೂ ಯಾತಕ್ಕೆ, ಎಲ್ಲಿ, ಏನು, ಯಾವಾಗ ಎಂಬ ಯೋಜನೆಗಳೇ ಇಲ್ಲ.
ಇದೇ ವೇಳೆ ತಮಿಳು ಭಾಷೆಗೆ ನೂರಾರು ಕೋಟಿ ರೂಪಾಯಿಗಳನ್ನು ಸಂಶೋಧನೆಗಾಗಿ, ಪ್ರಸಾರಕ್ಕಾಗಿ ಇನ್ನಷ್ಟು ಅಭಿವೃದ್ಧಿಗಾಗಿ, ಅಧ್ಯಯನಕ್ಕಾಗಿ, ತನ್ಮೂಲಕ ತಮಿಳು ಯುವಕರಿಗೆ ಉದ್ಯೋಗಕ್ಕಾಗಿ ನೀಡಲಾಯಿತು.
ಕನ್ನಡಕ್ಕೆ ಸ್ವಾಯತ್ತತೆ ನೀಡಬೇಕು ಎನ್ನುವ ಕೂಗು ಈಡೇರಿಸುವುದು ಕೇಂದ್ರಕ್ಕೇನೂ ಕಷ್ಟವಿಲ್ಲ. ಆದರೆ ಕೇಂದ್ರದ ಮನಸ್ಸುಗಳೇ ಬೇರೆ. ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಕಾದಿರಿಸಲಾದ ಹುದ್ದೆಗಳ ಭರ್ತಿಗೂ ಇದ್ದ ಅವಕಾಶವನ್ನು ಕಳೆದ ನಾಲ್ಕು ವರ್ಷಗಳಿಂದ ಕಿತ್ತುಕೊಳ್ಳಲಾಗಿದೆ.
ಬ್ಯಾಂಕಿಂಗ್, ರೈಲ್ವೆ, ವಿಮೆ, ಸಂಶೋಧನೆ, ಶಿಕ್ಷಣ ಇತ್ಯಾದಿ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸುವುದರ ಜೊತೆಗೆ, ಸಂದರ್ಶನ ಕೂಡ ಅನ್ಯಭಾಷೆಯಲ್ಲಿಯೇ ನಡೆದಾಗ ಉಂಟಾದ ಆಕ್ರೋಶಕ್ಕೆ ಮೂಗಿಗೆ ತುಪ್ಪ ಸವರಲಾಯಿತೇ ವಿನಾ ಶಾಶ್ವತ ಪರಿಹಾರ-ನಿರ್ದೇಶನವನ್ನು ಕೇಂದ್ರ ನೀಡಲೇ ಇಲ್ಲ! ಸಂಸತ್ತಿನಲ್ಲಿ ನೀಡಿದ ಭರವಸೆಯೂ ಸಂಸದರ- ಸಚಿವರುಗಳ ಹೇಳಿಕೆಗಳೆಲ್ಲವೂ ಕಣ್ಣೊರೆಸುವ ತಂತ್ರಗಳಾಗಿಬಿಟ್ಟಿವೆ. ಗ್ರಾಮೀಣ ಬ್ಯಾಂಕುಗಳ ಕ್ಲರಿಕಲ್ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳು ಈ ಮೊದಲು ಸ್ಥಳೀಯ ಭಾಷೆಯಲ್ಲಿರುತ್ತಿದ್ದವು. ಅದನ್ನು ತೆಗೆದು ಹಾಕಿದ್ದು ಏಕೆ? ಸ್ಥಳೀಯರಿಗೆ ಮೀಸಲಿಟ್ಟ ರೈಲ್ವೆ ಸಿ, ಡಿ' ಗುಂಪಿನ ಹುದ್ದೆಗಳಿಗೆ ಇರುವ ನಿರ್ಬಂಧವನ್ನೂ ಮುಕ್ತಗೊಳಿಸಲಾಗಿದೆ. ಆಯಾ ರಾಜ್ಯದ ಮಾತೃಭಾಷೆಯಲ್ಲಿ ಎಸ್ಸೆಸ್ಸೆಲ್ಸಿಯವರೆಗೆ ಕಲಿತವರು ಅಥವಾ ಮಾತೃಭಾಷೆಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು ಎನ್ನುವ ಷರತ್ತು ಸಡಿಲಿಸಿ, ನೇಮಕವಾದ ಆರು ತಿಂಗಳ ಒಳಗೆ ಸ್ಥಳೀಯ ಭಾಷೆ ಕಲಿತರಿಗೆ ಸಾಕು ಎನ್ನುವ ಮಾರ್ಪಡಿತ ಆದೇಶ ಕನ್ನಡಿಗರಿಗೆ ಮತ್ತು ಎಲ್ಲ ಪ್ರಾದೇಶಿಕ ಭಾಷಿಕರಿಗೂ ದೊಡ್ಡ ಹೊಡೆತ. ಹಿಂದಿ-ಇಂಗ್ಲಿಷಿನಲ್ಲಿ ಪರೀಕ್ಷೆ ನಡೆಸುವುದರಿಂದ ಹಿಂದಿ ರಾಜ್ಯಗಳ ಜನರಿಗೆ ಸುಲಭವಾಗಿ-ಸುರಳಿತವಾಗಿ ದೇಶಾದ್ಯಂತ ಕೆಲಸ ದೊರೆಯುತ್ತದೆ. ಅದೇ ಪ್ರಾದೇಶಿಕ ಭಾಷೆಯಲ್ಲಿ ಕಲಿತವರಿಗೆ, ಅದೂ ವಿಶೇಷವಾಗಿ ದಕ್ಷಿಣ ಭಾರತದ ದ್ರಾವಿಡ ಭಾಷಿಕರಿಗೆ (ಕನ್ನಡ, ತೆಲುಗು, ತಮಿಳು, ಮಳಯಾಳಿ) ಹಿಂದಿ ಕಷ್ಟ. ಹೀಗಾಗಿ ಕಳೆದ ಐದು ವರ್ಷಗಳಲ್ಲಿ ನಿಮ್ಮೂರ ಗ್ರಾಮೀಣ ಬ್ಯಾಂಕಿಗೂ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿಯ ಯುವಕ ಯುವತಿಯರೇ ನೇಮಕಗೊಳ್ಳುತ್ತಿದ್ದಾರೆ. ಇದರಿಂದ ದೊಡ್ಡ ಸಮಸ್ಯೆಯಾಗುವುದು ಜನಸಾಮಾನ್ಯರಿಗೆ. ಚಿಕ್ಕಪುಟ್ಟ ವ್ಯಾಪಾರಿ, ಕೃಷಿಕ, ಸಾಮಾನ್ಯ ಅನ್ಯಭಾಷಿಕರೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವುದು ಮೂಲ ಪ್ರಶ್ನೆಯಾದರೆ, ನಮ್ಮ ಉದ್ಯೋಗವನ್ನು ಇನ್ಯಾರೋ ಕಸಿದುಕೊಂಡರು ಎನ್ನುವ ನೋವು ಜನರದ್ದು. ಕನಿಷ್ಟ ಕ್ಲರಿಕಲ್ ಹುದ್ದೆಗಳು, ತಳಮಟ್ಟದ ಹುದ್ದೆಗಳಿಗೆ ಪ್ರಾದೇಶಿಕವಾಗಿಯೇ ನೇಮಕವಾಗಬೇಕು ಎನ್ನುವುದು ಇಂದು ನಿನ್ನೆಯ ಆಗ್ರಹವಲ್ಲ. ಹಿಂದೆ ಈ ಪದ್ಧತಿ ಇತ್ತೂ ಕೂಡ. ೨೮ ಸಂಸದರು ಈ ಸಂಬಂಧ ಧ್ವನಿ ಎತ್ತಬಹುದಿತ್ತಲ್ಲ. ಆದರೆ ಜೀ ಹುಜೂರ್, ಹಾಗೂ ಹೌದಪ್ಪನ ರಾಜಕೀಯ ಸಂಸ್ಕೃತಿಯ ನಮ್ಮ ಜನಪ್ರತಿನಿಧಿಗಳು ನಾಯಕರೆಲ್ಲಿ ಮುನಿಸಿಕೊಂಡಾರೋ ಎನ್ನುವ ಆತಂಕದಲ್ಲಿ, ತಮ್ಮ ರಾಜಕೀಯ ಸುರಕ್ಷತೆಗಾಗಿ ಇಂಥವುಗಳನ್ನು ಬಲಿಕೊಡುತ್ತಾರೆ. ಹುಬ್ಬಳ್ಳಿ ನೈಋತ್ಯ ರೈಲ್ವೆ ಕಚೇರಿ ಮುಂದೆ ನಾಲ್ಕು ವರ್ಷಗಳ ಹಿಂದೆ ಆಯ್ಕೆಗೊಂಡವರು ಈಗ ತಮ್ಮ ನೇಮಕಾತಿ ಆದೇಶಕ್ಕಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ!. ಅಂದರೆ ಯುವಕರ ಕೈಗೆ ಉದ್ಯೋಗ ನೀಡುವ ಭರವಸೆ, ಸರ್ಕಾರವೇ ನಡೆಸುವ ಉದ್ಯೋಗ ಮೇಳಗಳ ಕಥೆ- ಗತಿ ಏನು? ಇನ್ನು, ಕರ್ನಾಟಕ ೧೯೮೩ರಲ್ಲೇ ಸರೋಜಿನಿ ಮಹಿಷಿ ವರದಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕುರಿತು ಹೇಳಿದೆ. ನಲವತ್ತು ವರ್ಷಗಳ ನಂತರವೂ ಸರೋಜಿನಿ ಮಹಿಷಿ ವರದಿ ಯಥಾವತ್ ಜಾರಿಗೆ ಘನ ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಇದು ಕನ್ನಡದ ಸ್ಥಿತಿ. ಕರ್ನಾಟಕದಲ್ಲಿ ಉದ್ಯಮ ಆರಂಭಿಸುವವರಿಗೆ ಕನ್ನಡಿಗರಿಗೆ ಉದ್ಯೋಗ ನೀಡುವ ಷರತ್ತನ್ನೂ ಕೂಡ ಈ ಹಿಂದೆ ವಿಧಿಸಲಾಗಿತ್ತು. ಆದರೆ ಇದು ಕಡ್ಡಾಯವಾಗಿ ಪಾಲನೆಯಾಗಲೇ ಇಲ್ಲ. ಇತ್ತೀಚೆಗೆ ಬೊಮ್ಮಾಯಿ ಸರ್ಕಾರ ಕೂಡ ಅಂತಹ ಒಂದು ಆದೇಶವನ್ನು ಹೊರಡಿಸಿದೆ. ಕೈಗಾರಿಕಾ ಉದ್ಯೋಗ ನೀತಿ ಘೋಷಿಸಿ ಉದ್ಯೋಗವನ್ನು ಕನ್ನಡಿಗರಿಗೇ ನೀಡಬೇಕು ಎಂದು ಸೂಚನೆ ನೀಡಿದೆ. ಅದೇ ರೀತಿ ಕಾರ್ಮಿಕ ಇಲಾಖೆ ಇಂತಹ ಒಂದು ನಿರ್ದೇಶನವನ್ನು ನೀಡಿದೆ. ಇಷ್ಟಕ್ಕೂ ಇವೆಲ್ಲ ಕಾಗದ ಪತ್ರಗಳಲ್ಲಷ್ಟೇ. ಜನರ ಕಣ್ಣೊರೆಸುವ ವ್ಯವಹಾರಗಳಿವು. ತಂತ್ರಗಳಿವು. ಕಳೆದ ಸೆಪ್ಟೆಂಬರ್ ಅಧಿವೇಶನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಸನಬದ್ಧ ಅಧಿಕಾರ, ಆಡಳಿತದಲ್ಲಿ ಕಡ್ಡಾಯ, ಕನ್ನಡಿಗರಿಗೆ ಉದ್ಯೋಗ ಕಡ್ಡಾಯ ಕಾಯ್ದೆಯನ್ನು (ಸಮಗ್ರ ಭಾಷಾಭಿವೃದ್ಧಿ ವಿಧೇಯಕ) ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಮೊನ್ನೆಯ ಬೆಳಗಾವಿ ಅಧಿವೇಶನದಲ್ಲಿಯೂ ಕೂಡ ಚರ್ಚೆಗಾಗಿ ಇಟ್ಟರೂ ಕೊನೆಯವರೆಗೂ ಇದು ಸದನಕ್ಕೆ ಬರಲೇ ಇಲ್ಲ! ಈ ಕಾಯ್ದೆಯ ಮಹತ್ವವನ್ನೇನೋ ತುಂಬ ಬಣ್ಣಿಸಲಾಗಿದೆ. ಇದೊಂದು ಕ್ರಾಂತಿಕಾರಿ ಕಾಯ್ದೆಯೇ. ಇದರಲ್ಲಿರುವ ಅಡಕ ಒಟ್ಟಾರೆ ಕನ್ನಡ ಬೆಳವಣಿಗೆ, ಕನ್ನಡ ಕೆಲಸ, ತಂತ್ರಾಂಶ ಅಭಿವೃದ್ಧಿ, ಭಾಷಾಭಿವೃದ್ಧಿ ಇತ್ಯಾದಿ ಒಳಗೊಂಡಿದೆ ಈ ಮಸೂದೆ. ಆದರೆ ಪ್ರಸ್ತುತ ಸರ್ಕಾರಕ್ಕೆ ಈ ಬಗ್ಗೆ ಪ್ರಚಾರ ಬೇಕು; ಅನುಷ್ಟಾನ ಬೇಕಿಲ್ಲ ಎನಿಸುತ್ತದೆ. ಆದ್ದರಿಂದಲೇ ಶಾಸನ ಸಭೆ ನಡೆಯುವಾಗ ಪ್ರತಿದಿನವೂ ವಿಷಯ ಪಟ್ಟಿಯಲ್ಲಿ (ಅಜೆಂಡಾ) ಸೇರಿಯೂ ಇದು ಚರ್ಚಿತವಾಗಿ ಅಂಗೀಕಾರವಾಗದೇ ಉಳಿದು ಹೋಗಿದೆ!. ಕನ್ನಡ ನೆಲ ಜಲ ರಕ್ಷಣೆ ಘೋಷಣೆಯಲ್ಲೇ ಉಳಿದಿವೆ. ಆದಾಗ್ಯೂ ಈ ಸಾರೆ ಬೆಳಗಾವಿ ಅಧಿವೇಶನ ವೇಳೆ ಆಯೋಜಿಸಿದ್ದಮರಾಠಿ ಮಹಾಮೇಳಾವ್’ ನಡೆಯದಂತೆ ದಿಟ್ಟ ಕ್ರಮ ಕೈಗೊಂಡಿದ್ದು ಸರ್ಕಾರದ ಸಾಧನೆಯಲ್ಲೊಂದು ಎಂಬುದರಲ್ಲಿ ಎರಡು ಮಾತಿಲ್ಲ. ಗಡಿ ನಮ್ಮದು ಎನ್ನುವ ಘೋಷಣೆಯಲ್ಲಿ ಔಪಚಾರಿಕತೆ ಕಂಡರೂ, ಮಹಾಮೇಳಾವ್‌ಅನ್ನು ಇದೇ ಮೊದಲ ಬಾರಿ ಬಗ್ಗು ಬಡಿದದ್ದು ಪ್ರಾಯೋಗಿಕವಾಗಿ ಇಡೀ ಕನ್ನಡಿಗರ ವಿಜಯ.
ಇಂತಹ ಸಂತಸದ ಸಂಗತಿಯ ನಡುವೆಯೂ ಗಡಿ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಗಡಿ ವಿವಾದದ ಮಹಾ' ಪ್ರಸ್ತಾವನೆ ಮುಂದುವರಿದಿರುವುದು ಕನ್ನಡಿಗರಿಗೆ ಕಿರಿಕಿರಿಯ ವಿಷಯ. ಈ ವಿಷಯದಲ್ಲಿ ಕೇಂದ್ರ ಸರ್ಕಾರಗಡಿ ವಿವಾದ ಮುಗಿದ ಅಧ್ಯಾಯ’ ಎನ್ನುವ ಪ್ರಮಾಣ ಪತ್ರವನ್ನು ಸವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಬೇಕು. ಹಾಗಾದರೆ ೨೫ ಸಂಸದರನ್ನು ರವಾನೆ ಮಾಡಿದ, ಡಬಲ್ ಎಂಜಿನ್ ಸರ್ಕಾರ ಸಹಿಸಿಕೊಂಡು ಬೆಂಬಲಿಸಿದ ಕನ್ನಡದ ಮನಸ್ಸುಗಳಿಗೆ ಧನ್ಯತೆ ನೀಡಿದಂತಾಗುತ್ತದೆ. ಅಲ್ಲವೇ?
ಹಾವೇರಿ ಸಾಹಿತ್ಯ ಸಮ್ಮೇಳನ ಈ ಸಾರೆ ಮುಖ್ಯಮಂತ್ರಿ ಜಿಲ್ಲೆಯಲ್ಲೇ ನಡೆಯಲಿರುವುದರಿಂದ, ಬಸವರಾಜ ಬೊಮ್ಮಾಯಿಯವರಲ್ಲಿ ತೆರೆದ ಮನಸ್ಸು-ಯೋಚಿಸುವ ಶಕ್ತಿ ಇರುವುದರಿಂದ ಸಮಗ್ರ ಭಾಷಾಭಿವೃದ್ಧಿ ವಿಧೇಯಕವನ್ನು ಸುಗ್ರೀವಾಜ್ಞೆಯ ಮೂಲಕ ಘೋಷಿಸುವ, ಕನ್ನಡ ಕೈಗಾರಿಕಾ ನೀತಿ ಅನುಷ್ಟಾನ ಮಾಡುವ; ಕನ್ನಡ ಅಧ್ಯಯನ ಬೆಳವಣಿಗೆಗೆ ಕನ್ನಡದ ಶಾಸ್ತ್ರೀಯ ಸ್ಥಾನಮಾನಕ್ಕೆ ನಿಖರ ಯೋಜನೆಗಳನ್ನು ಪ್ರಕಟಿಸುವ ಇಚ್ಛಾಶಕ್ತಿಯನ್ನು ಅವರು ಸಮ್ಮೇಳನ ವೇದಿಕೆಯ ಮೂಲಕ ತೋರಿಸಬೇಕಿದೆ. ಈ ಸದವಕಾಶ ಬೊಮ್ಮಾಯಿಯವರಿಗೆ ಮುಂದೆಂದೂ ಸಿಗದು. ಕನ್ನಡದ ಮನಸ್ಸುಗಳೂ ಕಾಯುತ್ತಿವೆ.