ವಿಜಯಪುರ: ಮನಸ್ಸಿನ ಆಳಕ್ಕೆ ಮುಟ್ಟುವಂತೆ ಪ್ರವಚನವನ್ನು ಬೋಧಿಸಿ, ಆದರ್ಶದ ಬದುಕಿಗೆ ನಿದರ್ಶನ, ಸರಳತೆ, ಸಾತ್ವಿಕತೆಯ ಸಾಕಾರ ರೂಪ, ನುಡಿದಂತೆ ಅಕ್ಷರಶಃ ನಡೆದು ನಡೆದಾಡುವ ದೇವರು' ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಇಹಲೋಕ ತ್ಯಜಿಸಿರುವುದು ಸಮಸ್ತ ಭಕ್ತ ಸಾಗರವನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳನ್ನು
ಅಪ್ಪಾರು’ ಎಂತಲೇ ಭಕ್ತಿಪೂರ್ವಕವಾಗಿ ಕರೆಯುವುದುಂಟು. ಈಗ ಅಪ್ಪನವರ ದಿವ್ಯ ವಾಣಿಗಳು ಈ ಕರಣಗಳು ಕೇಳಲಾರವಲ್ಲ ಎಂಬ ಅಳು ಹಾಗೂ ಅಳಲು ಅಸಂಖ್ಯ ಭಕ್ತವರ್ಗದಲ್ಲಿ ಮನೆ ಮಾಡಿದ್ದಂತೂ ಸತ್ಯ.
ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸವಾದ ಮಾಹಿತಿ ಹರಿದಾಡಿದ ಕೆಲವೇ ಕ್ಷಣಗಳಲ್ಲಿ ಜ್ಞಾನಯೋಗಾಶ್ರಮದತ್ತ ಭಕ್ತರ ದಂಡು ಜ್ಞಾನಯೋಗಾಶ್ರಮದಲ್ಲಿ ಜಮಾಯಿಸಿತ್ತು. ಅನೇಕರು ಊಟವನ್ನು ತ್ಯಜಿಸಿದ್ದರು, ಭಗವಂತನಿಗೆ ಮೊರೆ ಹೋಗಿ ಶ್ರೀಗಳ ಗುಣಮುಖರಾಗಲು ಪ್ರಾರ್ಥಿಸಿದರು. ೮೦ ಕಿ.ಮೀ. ದೀರ್ಘದಂಡ ನಮಸ್ಕಾರ ಹಾಕಿ ವಿವಿಧ ರೂಪದಲ್ಲಿ ಭಕ್ತಿ ಸೇವೆ ಮಾಡಿದರು. ಇವರೆಲ್ಲರ ಪ್ರಾರ್ಥನೆ ಫಲಿಸಲಿಲ್ಲ, ಜ್ಞಾನಯೋಗಾಶ್ರಮದಲ್ಲಿ ಶ್ರೀಗಳು ಇಹಲೋಕ ತ್ಯಜಿಸಿದ ಸುದ್ದಿ ಗೊತ್ತಾದಾಗ ಭಕ್ತರ ಮನಸ್ಸು ಕೇಳಲು ಹೇಗೆ ಸಾಧ್ಯ? ಎಲ್ಲಿ ನೋಡಿದರೂ ಸಹ ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಲೇ ಇದೆ.