ಹುಬ್ಬಳ್ಳಿ: ಕಾಂಗ್ರೆಸ್ ಮಹದಾಯಿ ವಿಚಾರವಾಗಿ ಹೋರಾಟ ಮಾಡಲು ಮುಂದಾದಾಗ ನಮಗೆ ಹೆಚ್ಚಿನ ಜನ ಬೆಂಬಲ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಪ್ರಕಟಿಸಿರುವ ಆದೇಶಕ್ಕೆ ನಿರ್ದಿಷ್ಟ ದಿನಾಂಕವೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಅವರು ಹಳೇ ಮೈಸೂರು ಭಾಗವವನ್ನು ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹಳೇ ಮೈಸೂರು ಭಾಗ ಇರಲಿ, ನಾವು ಧಾರವಾಡದಲ್ಲಿ ನಿಂತಿದ್ದು, ಮಹದಾಯಿ ವಿಚಾರವಾಗಿ ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ತ್ರಿಬಲ್ ಇಂಜಿನ್ ಸರಕಾರ ಇದ್ದರೂ ನಮ್ಮ ಜನರಿಗೆ ನ್ಯಾಯ ಒದಗಿಸಿಕೊಡಲು ಆಗಿಲ್ಲ. ನಾವು ಹೋರಾಟ ಮಾಡುತ್ತೇವೆ. ಜನ ಬೆಂಬಲ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅಂತಿಮವಾಗಿ ಗೋವಾ ಹಾಗೂ ಮಹರಾಷ್ಟ್ರದ ತಕರಾರಿನ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಏನಾಗುತ್ತದೆ ಎಂದು ನೋಡಿಕೊಂಡು ಯೋಜನೆ ಮಾಡುವುದಾಗಿ ಹೇಳಿದ್ದಾರೆ. ಇವರು ಕೇವಲ ರಾಜಕೀಯವಾಗಿ ಚಾಕಲೇಟ್ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರು ಒಂದೇ ದಿನದಲ್ಲಿ ಯೋಜನೆ ಆರಂಭಿಸುವುದಾಗಿ ಹೇಳಿದ್ದರು. ಈಗ ಪ್ರಲ್ಹಾದ ಜೋಶಿ ಅವರು ಉನ್ನತ ಸ್ಥಾನದಲ್ಲಿದ್ದು, ಇಷ್ಟೊಂದು ಸುಳ್ಳು ಯಾಕೆ ಹೇಳುತ್ತಿದ್ದಾರೆ? ಈ ಭಾಗದ ಜನರು ದಡ್ಡರಾ? ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಜನರ ಧ್ವನಿ, ಆಕ್ರೋಶ ನಮ್ಮ ಕಾರ್ಯಕ್ರಮದಲ್ಲಿ ವ್ಯಕ್ತವಾಗಲಿದೆ. ಸರ್ಕಾರ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸರ್ಕಾರ ಗೋವಾ ಮತ್ತು ಮಹಾರಾಷ್ಟ್ರದ ತಕರಾರನ್ನು ತೆರವುಗೊಳಿಸಿ ಈ ಯೋಜನೆ ಮಾಡಲಿ. ಅದು ಯಾಕೆ ಸಾಧ್ಯವಾಗುತ್ತಿಲ್ಲ? ಗೋವಾದಲ್ಲಿ 1 ಸೀಟು ಮುಖ್ಯವೋ ಇಲ್ಲಿನ 27 ಕ್ಷೇತ್ರಗಳು ಮುಖ್ಯವೋ? ಇದು ಕರ್ನಾಟಕ ಜನತೆಗೆ ಆಗುತ್ತಿರುವ ಅನ್ಯಾಯದ ಪರಮಾವಧಿ. ಇದೆಲ್ಲವೂ ಜನರ ಕಣ್ಣೊರೆಸುವ, ತಪ್ಪು ದಾರಿಗೆ ಎಳೆಯುವ ತಂತ್ರವಾಗಿದೆ ಎಂದರು.