ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿಕೆಗೆ ಸಚಿವ ಅಶ್ವತ್ಥನಾರಾಯಣ ತಿರುಗೇಟು
ಮುಂಬೈನಲ್ಲಿ ಮರಾಠಿಗರ ಸಂಖ್ಯೆ‌ ಎಷ್ಟಿದೆ‌

Advertisement

ಹುಬ್ಬಳ್ಳಿ: ಮುಂಬೈನಲ್ಲಿ‌ ಮರಾಠಿ ಭಾಷಿಕರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂದು ನಾವು ಪ್ರಶ್ನಿಸಿದರೆ ಅವರಿಗೇ ಸಮಸ್ಯೆಯಾಗುತ್ತದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಕೆ. ಅಶ್ವತ್ಥನಾರಾಯಣ ಅವರು ರಾಜ್ಯದ ಕೆಲವು ಪ್ರದೇಶಗಳನ್ನು‌ ಕೇಂದ್ರಾಡಳಿತ ಮಾಡಬೇಕೆಂದು ಹೇಳಿಕೆ‌ ನೀಡಿದ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಡಿವಿವಾದ ಮುಗಿದ ವಿಷಯ. ಆಗಾಗ ಈ ವಿಚಾರ ತೆಗೆಯುತ್ತ ಅವರಿಗೂ, ಜನರಿಗೂ ಸಮಸ್ಯೆ ತಂದಿಡುತ್ತಿದ್ದಾರೆ. ಜನರ ಬಗ್ಗೆ ಕಾಳಜಿಯಿಲ್ಲದ‌ ಅವರು ರಾಜಕೀಯ ಹಾಗೂ‌ ಸ್ವಾರ್ಥಕ್ಕಾಗಿ‌ ಹೀಗೆ ಮಾಡುತ್ತಿದ್ದಾರೆ. ಇಂತಹ ನಾಯಕರು ಸಮಾಜಕ್ಕೆ ಸಮಸ್ಯೆ‌ ಹಾಗೂ ಭಾರ. ಬೆಳಗಾವಿ, ನಿಪ್ಪಾಣಿ, ಕಾರವಾರ ಕೇಂದ್ರಾಡಳಿತ ಪ್ರದೇಶವಾಗಬೇಕೆಂಬ ಆಲೋಚನೆ ಅವರಿಗೆ ಹೇಗೆ ಬಂತು ತಿಳಿಯುತ್ತಿಲ್ಲ ಎಂದರು.
ಕೋವಿಡ್ ನೆಪದಲ್ಲಿ ಅವಧಿಪೂರ್ವ‌ ಚುನಾವಣೆ ನಡೆಸಲು‌ ಬಿಜೆಪಿ ಮುಂದಾಗಿದೆ ಎನ್ನುವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ‘ಡಿ.ಕೆ. ಶಿವಕುಮಾರ‌ ಅವರಿಗೆ ತಿಳಿವಳಿಕೆ‌ ಕೊರತೆ ಇದೆ. ಹಲವಾರು ಜವಾಬ್ದಾರಿ ನಿರ್ವಹಿಸಿರುವ ಅವರು, ವಿಶ್ವದಾದ್ಯಂತ ಏನಾಗುತ್ತಿದೆ ಎನ್ನುವುದು ತಿಳಿದಿಲ್ಲವೇ? ಅವರಿಗೆ ರಾಜಕೀಯ ಮತ್ತು ಚುನಾವಣೆ ಬಿಟ್ಟರೆ, ಜನರ ಸಮಸ್ಯೆ ಹಾಗೂ ಆರೋಗ್ಯದ ಚಿಂತನೆಯಿಲ್ಲ. ಅಧಿಕಾರ ಕಳೆದುಕೊಂಡ ಅವರಿಗೆ ಬಹಳ ಸಂಕಟವಾಗುತ್ತಿದೆ. ಇದೀಗ ಅದರ ಹಪಾಹಪಿ, ಹಸಿವು ಹೆಚ್ಚಿರುವುದರಿಂದ‌ ಹೀಗೆಲ್ಲ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.