ಸದನದ ಕಲಾಪವನ್ನೇ ನುಂಗಿದ ಏಕವಚನ

Advertisement

ಬೆಳಗಾವಿ: ಏಕವಚನ ಪ್ರಯೋಗ ಸದನದ ಕಲಾಪವನ್ನೇ ನುಂಗಿ, ಪರಸ್ಪರ ವಾಗ್ವಾದ, ಗದ್ದಲ, ಕೋಲಾಹಲಕ್ಕೆ ಕಾರಣವಾಗಿ ಸದನವನ್ನು ಮುಂದೂಡಿದ ಪ್ರಸಂಗ ಜರುಗಿತು.
ಹೌದು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಶಾಸಕರೊಬ್ಬರನ್ನು ಸಚಿವರಿಬ್ಬರು ಏಕವಚನದಲ್ಲಿ ಗದರಿಸಿದ ಪರಿಣಾಮ ಈ ಗದ್ದಲ ಜೋರಾಯಿತು.
ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಕುಮಾರ ಬಂಗಾರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರ ಜೊತೆ ನಡೆಸಿದ ಸಂಧಾನ ವಿಫಲವಾಗಿದ್ದರಿಂದ ಅನಿವಾರ್ಯವಾಗಿ ಸದನವನ್ನು ಮುಂದೂಡಲಾಯಿತು.
ಸದಸ್ಯರ ವಿರುದ್ಧ ಲಘುವಾಗಿ ಮಾತನಾಡಿರುವ ಸಚಿವ ಗೋವಿಂದ ಕಾರಜೋಳ ಅವರು ಕ್ಷಮೆ ಕೇಳಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರೆ, ಸಚಿವರು ಉತ್ತರಿಸುತ್ತಿದ್ದ ವೇಳೆ ಸಭಾಧ್ಯಕ್ಷರ ಅನುಮತಿ ಇಲ್ಲದೆ ಉಪಪ್ರಶ್ನೆ ಕೇಳಿದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಮೊದಲು ಅಮಾನತುಪಡಿಸಬೇಕೆಂದು ಪಟ್ಟು ಹಿಡಿಯಲಾಯಿತು.
ಹೀಗೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ತಮ್ಮ ತಮ್ಮ ಪ್ರತಿಷ್ಠೆಗೆ ಬಿದ್ದ ಪರಿಣಾಮ ಸದನವನ್ನು ಎರಡು ಬಾರಿ ಮುಂದೂಡಲಾಯಿತು. ಗ್ರಾಮೀಣ ಭಾಗಗಳಿಗೆ ಬಸ್ ಸೌಲಭ್ಯಗಳನ್ನು ಒದಗಿಸಬೇಕೆಂದು ಶಾಸಕ ಸಿದ್ದು ಸವದಿಯವರು ಸಚಿವ ಶ್ರೀರಾಮುಲು ಅವರಿಗೆ ಮನವಿ ಮಾಡಿದರು.
ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅನೇಕ ಸದಸ್ಯರು ಇದು ಕೇವಲ ಒಂದು ಕ್ಷೇತ್ರದ ಸಮಸ್ಯೆಯಲ್ಲ. ರಾಜ್ಯದ ಅನೇಕ ಕಡೆ ಸಮಸ್ಯೆಯಿದೆ. ಪರಿಣಾಮ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ರಸ್ತೆಗಳಿಲ್ಲ, ಚಾಲಕರಿಲ್ಲ, ಇದರಿಂದ ತೊಂದರೆಯಾಗಿದೆ ಎಂದು ಸರ್ಕಾರದ ಗಮನ ಸೆಳೆದರು.