ಹುಬ್ಬಳ್ಳಿ: ಇಲ್ಲಿನ ಭೈರಿದೇವರಕೊಪ್ಪದಲ್ಲಿರುವ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾದ ಒಂದು ಭಾಗ ಹಾಗೂ ಕೆಲವು ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಬುಧವಾರ ಬೆಳಿಗ್ಗೆ7-30ಕ್ಕೆ ಆರಂಭವಾಗಿದೆ.
ಮುಂಜಾಗ್ರತಾ ಕ್ರಮವಾಗಿ ದರ್ಗಾದ ಸುತ್ತಮುತ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹುಬ್ಬಳ್ಳಿ–ಧಾರವಾಡ ಸೇರಿದಂತೆ ಉತ್ತರ ಕನ್ನಡ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ಕರೆಸಿಕೊಳ್ಳಲಾಗಿದೆ.
ಹುಬ್ಬಳ್ಳಿ-ಧಾರವಾಡ ಮುಖ್ಯರಸ್ತೆಯನ್ನು ಹುಬ್ಬಳ್ಳಿ ಕಡೆಯಿಂದ ಭೈರಿದೇವರಕೊಪ್ಪ ಮತ್ತು ಧಾರವಾಡ ಕಡೆಯಿಂದ ಎಪಿಎಂಸಿ ಮೊದಲ ಗೇಟ್ ಬಳಿ ಬಂದ್ ಮಾಡಲಾಗಿದೆ. ಒಳ ರಸ್ತೆಗಳ ಮೂಲಕ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ತೆರವು ಕಾರ್ಯಾಚರಣೆ ನಿಮಿತ್ತ ಮಂಗಳವಾರ ತಡರಾತ್ರಿ ದರ್ಗಾದ ಸುತ್ತಲಿನ ಜಿಲ್ಲಾಡಳಿತದ ವತಿಯಿಂದ ತೆರವು ಕಾರ್ಯಾಚರಣೆ ಕಾಣದಂತೆ ತಗಡುಗಳನ್ನು ಅಳವಡಿಕೆ ಮಾಡಲಾಗಿದೆ.
ಈ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹುಬ್ಬಳ್ಳಿ – ಧಾರವಾಡ ಅವಳಿನಗರದಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅವಳಿನಗರ ಆಯಕಟ್ಟಿನ ಸ್ಥಳಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.