ಇನ್ಮುಂದೆ ವರ್ತೂರು ಪ್ರಕಾಶ ಅವರದ್ದೇ ಹವಾ: ಸಿನಿಮಾ ಡೈಲಾಗ್‌ ಹೊಡೆದ ಸಚಿವ ಸುಧಾಕರ

Advertisement

ಕೋಲಾರ: ಇದುವರೆಗೂ ಬೇರೆಯವರ ಹವಾ, ಇನ್ಮುಂದೆ ವರ್ತೂರು ಪ್ರಕಾಶ ಅವರದ್ದೇ ಹವಾ ಎಂದು ಸಿನಿಮಾ ಡೈಲಾಗ್‌ ಹೊಡೆಯುವ ಮೂಲಕ ಆರೋಗ್ಯ ಸಚಿವ ಸುಧಾಕರ ಜನರ ಕೇಕೆ ಹೆಚ್ಚಿಸಿದರು.
ಕೋಲಾರ ನಗರದ ಸಿ.ಬೈರೇಗೌಡ ನಗರದಲ್ಲಿ ಹಮ್ಮಿಕೊಂಡಿದ್ದ ವರ್ತೂರು ಪ್ರಕಾಶ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ರಾಜಕಾರಣಕ್ಕಾಗಿ ಮಾತನಾಡುತ್ತಿಲ್ಲ. ಕೋಲಾರ ಮುಖಂಡರು ಅವರೊಂದಿಗಿದ್ದಾರೆ. ಎಂತಹದ್ದೇ ಪರಿಸ್ಥಿತಿಯಲ್ಲೂ ನಾನು ಮತ್ತು ಮುನಿರತ್ನ ಅವರ ಜೊತೆಗಿರುತ್ತೇವೆ ಎಂದರು.
ಸಚಿವ ಮುನಿರತ್ನ ಮಾತನಾಡಿ, ಕೋಲಾರದಲ್ಲಿ 15 ದಿನದ ಮುಂಚೆಯೇ ಹೊಸ ವರ್ಷ ಆಚರಿಸುತ್ತಿದ್ದೇವೆ. ಯುಗಾದಿಗೆ ಹೊಸ ಶಾಸಕರನ್ನು ನೀವು ನೀಡುತ್ತೀರೆಂಬ ವಿಶ್ವಾಸವಿದೆ. ವರ್ತೂರ್ ಅವರಂತಹ ಒಳ್ಳೆ ಗುಣ ಇರುವವರು ನಮಗೆ ಸಿಗುವುದ ಕಷ್ಟ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಯುಗಾದಿಗೆ ವರ್ತೂರ್ ಶಾಸಕರಾಗುವುದು ಖಚಿತ. ಅವರ ಮುಂದಿನ ಭವಿಷ್ಯಕ್ಕೆ ಏನೂ ಬೇಕೋ ಅದನ್ನ ನೋಡಿಕೊಳ್ಳುವುದು ಸುಧಾಕರ್ ಹಾಗೂ ನನ್ನ ಜವಾಬ್ದಾರಿ‌.
ಮುಂದಿನ ರಾಜಕೀಯಕ್ಕೆ ಶುಭಾಶಯ ಕೋರಲು ಇಲ್ಲಿ ಬಂದಿದ್ದೇವೆ ಎಂದರು.
ಬಿರಿಯಾನಿಗೆ ಮುಗಿಬಿದ್ದ ಜನ
ವರ್ತೂರು ಪ್ರಕಾಶ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಜನ ಬಿರಿಯಾನಿ ಹಾಗೂ ಚಿಕನ್‌ ಗ್ರೇವಿಗೆ ಮುಗಿಬಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬ್ಯಾರಿಕೇಡ್‌ ಹಾಕಿದರೂ ಊಟದ ಕೌಂಟರ್‌ ಬಳಿ ತಳ್ಳಾಟ, ನೂಕಾಟ ಸಾಮಾನ್ಯವಾಗಿತ್ತು.