ಮನುಷ್ಯನ ಬದುಕು ಯಾಂತ್ರಿಕ ಬದುಕಾಗಿ ಬಿಟ್ಟಿದೆ. ಪ್ರತಿಯೊಬ್ಬ ವ್ಯಕ್ತಿ ಸ್ವಾರ್ಥ ಬಯಸಿ ಇನ್ನೊಬ್ಬ ವ್ಯಕ್ತಿಗೆ ಅಥವಾ ಸಮಾಜಕ್ಕೆ ತೊಂದರೆ ಕೊಡಲು ಹೊರಟಿದ್ದಾನೆ. ಮನುಷ್ಯನ ಬದುಕು ಸಾಮಾನ್ಯ ಬದುಕಲ್ಲ. ನರಿ ನಾಯಿಗಳೂ ಕೂಡ ತಿಪ್ಪೆ ಮೇಲೆ ತಮ್ಮ ಬದುಕು ರೂಪಿಸಿಕೊಳ್ಳುತ್ತವೆ. ಆದರೆ ಮನುಷ್ಯರಾಗಿ ಹುಟ್ಟಿದ ಮೇಲೆ ನಮಗೆ ಭಗವಂತ ನಮಗೆ ಜ್ಞಾನ ಕೊಟ್ಟಿದ್ದಾನೆ. ಧರ್ಮ, ಅಧರ್ಮ, ನ್ಯಾಯ ಅನ್ಯಾಯ, ನೀತಿ, ಅನೀತಿ ಬಗ್ಗೆ ನಮಗೆ ಅರಿವು ನೀಡಿದ್ದಾನೆ. ಹೀಗಿದ್ದ್ದರೂ ಕೂಡ ನಮ್ಮ ಸ್ವಾರ್ಥ ಮತ್ತು ದುರಾಸೆಯಿಂದ ಇನ್ನೊಬ್ಬರಿಗೆ ಕೇಡುಂಟು ಮಾಡುವ ಪ್ರಯತ್ನ ಮಾಡುತ್ತೇವೆ. ಯಾವಾಗಲೂ ನಾವು ಉತ್ತಮರ ಸಂಗ ಮಾಡಿ ಸಂತರ ಶರಣರ ಮಾರ್ಗದರ್ಶನದಲ್ಲಿ ಬದುಕಿ ನಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಯಾರಾದರೂ ನಮ್ಮ ಪ್ರಶಂಸೆ ಮಾಡಿದರೆ, ಹಿಗ್ಗದೇ, ನಿಂದಿಸಿದರೆ ಕುಗ್ಗದೇ ಮುಂದೆ ಸಾಗಬೇಕು. `ನಿಂದಕರ ಮನೆ ಮುಂದೆ ಮನೆ ಮಾಡಿಕೊಂಡಿರು..’ ಎಂದು ಸಂತರು ಹೇಳಿದ್ದಾರೆ. ನಿಂದಕರು ನಮ್ಮ ಮನೆ ಮುಂದೆ ಇದ್ದರೆ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಬದುಕಲು ಸಹಾಯವಾಗುತ್ತದೆ. ಹಜರತ್ ಮಹ್ಮದ ಪೈಗಂಬರರು ದಿನಾಲು ನಮಾಜ್ ಮಾಡಲು ಮಸೂತಿಗೆ ಹೋಗು ಸಮಯದಲ್ಲಿ ಒಬ್ಬ ಮುದುಕಿಯು ಹಜರತ್ ಪೈಗಂಬರರ ಮೇಲೆ ಮಹಡಿ ಮೇಲಿಂದ ಕಸ ಚಲ್ಲುತ್ತಿದ್ದಳು, ಅವರು ಜಾಡಿಸಿಕೊಂಡು ಮುಂದೆ ಹೋಗುತ್ತಿದ್ದರು. ಆದರೆ ಆ ಮುದುಕಿಗೆ ತಿರುಗಿ ಏನೂ ಅನ್ನುತ್ತಿರಲಿಲ್ಲ. ಒಂದು ದಿನ ನಮಾಜಿಗೆ ಹೋಗುವ ಸಮಯದಲ್ಲಿ ಹಜರತ್ರ ಮೇಲೆ ಕಸ ಬೀಳಲಿಲ್ಲ. ಆಗ ಪೈಗಂಬರರು ನಮಾಜ್ ಮುಗಿಸಿ ಮರಳಿ ಆ ಸ್ಥಳಕ್ಕೆ ಬಂದು ಮುದುಕಿ ಕಂಡು ಇಂದು ನನ್ನ ಮೇಲೆ ಯಾಕೆ ಕಸ ಹಾಕಲಿಲ್ಲ? ಎಂದು ಕೇಳಲು ಅನುವಾದರು. ಆದರೆ ಆ ವೇಳೆಗಾಗಲೇ ಪೈಗಂಬರರಿಗೆ ಆ ಮುದುಕಿಗೆ ಮೈಯ್ಯಲ್ಲಿ ಹುಷಾರು ಇಲ್ಲವೆಂದು ತಿಳಿಯಿತು.
ಹಜರತ್ ಪೈಗಂಬರರು ಮಹಡಿ ಮೇಲೆ ತಾವೇ ಏರಿ ಹೋಗಿ ಆ ಮುದುಕಿಯ ಯೋಗಕ್ಷೇಮ ಕೇಳಿ ಉಪಚಾರ ಮಾಡುತ್ತಾರೆ. ಅವರ ಈ ಸದ್ಗುಣ ನೋಡಿ ದಿನನಿತ್ಯ ನಾನು ಪೈಗಂಬರರ ಮೇಲೆ ಕಸ ಚೆಲ್ಲಿ ಅಪರಾಧ ಮಾಡುತ್ತಲೇ ಇದ್ದೆ. ಯಾವುದೇ ಪ್ರತಿಕ್ರಿಯೆ ತೋರುತ್ತಿರಲಿಲ್ಲ. ಇಂದು ನಾನು ಒಂದು ದಿನ ಕಸ ಚೆಲ್ಲದೇ ಕಾರಣ ನನ್ನ ಯೋಗಕ್ಷೇಮವನ್ನು ವಿಚಾರಿಸಲು ಆಗಮಿಸಿದರಲ್ಲಾ..? ಎಂಥಾ ಸದ್ಗುಣಿ ಇವರು? ಎಂದುಕೊಂಡು ಆ ಮುದುಕಿ ಪೈಗಂಬರರಲ್ಲಿ ಕ್ಷಮೆ ಕೇಳುತ್ತಾಳೆ. ಮನುಷ್ಯರಾದ ನಾವು ಇಂತಹ ಸದ್ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ್ದಾದರೆ ನಮ್ಮ ಜೀವ ಸಾರ್ಥಕವಾಗುತ್ತದೆ. ಉತ್ತಮ ಬದುಕು ಸಾಗಿಸಬಹುದು.