ಡಿ. 25ಕ್ಕೆ ಎಲ್ಲ ತಿಳಿಸುವೆ-ಗಾಲಿ ಜನಾರ್ದನ ರೆಡ್ಡಿ

Advertisement

ತುಮಕೂರು: ಗಾಲಿ ಜನಾರ್ದನ ರೆಡ್ಡಿ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ಶುಭ ಸೋಮವಾರ. ಹೀಗಾಗಿ, ದರ್ಶನ ಪಡೆಯಲು ಬಂದಿದ್ದೇನೆ ಎಂದರು.
ಚಿಕ್ಕಂದಿನಿಂದಲೂ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಳ್ಳುತ್ತಿದ್ದೇನೆ. ಶಿವಕುಮಾರ ಶ್ರೀಗಳು ಲಿಂಗೈಕ್ಯರಾದಾಗಲೂ ನಾನು ಇಲ್ಲಿಗೆ ಬಂದಿದ್ದೆ. ಅದಾದ ನಂತರ ಇಂದು ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿರುವುದಾಗಿ ಹೇಳಿದರು.
ನಾನು ಸಾರ್ವಜನಿಕ ಜೀವನಕ್ಕೆ ವಾಪಸ್ ಬರಬೇಕು ಎಂದು ನಿರ್ಧರಿಸಿದ್ದು, ಅದಕ್ಕಾಗಿ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದುಕೊಳ್ಳಲು ಆಗಮಿಸಿದ್ದೇನೆ. ಎಲ್ಲಾ ಮಠಗಳಿಗೂ ಭೇಟಿ ನೀಡುತ್ತಿದ್ದೇನೆ. ಶಿವಕುಮಾರ ಶ್ರೀಗಳು ಜಾತಿ, ಮತ ಭೇದ ಮಾಡದೆ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಅಲ್ಲದೇ ತ್ರಿವಿಧ ದಾಸೋಹವನ್ನು ಮಾಡಿದ್ದಾರೆ. ನಾನು ಅವರ ಮಾರ್ಗದರ್ಶನದಲ್ಲಿಯೇ ಮುಂದೆ ಹೋಗಲು ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು. ಇನ್ನು ಹೊಸ ಪಕ್ಷವನ್ನು ಕಟ್ಟುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ, ಡಿ. 25ಕ್ಕೆ ಮಾಧ್ಯಮಗೋಷ್ಠಿ ನಡೆಸಿ ಎಲ್ಲವನ್ನೂ ತಿಳಿಸುತ್ತೇನೆ ಎಂದರು.