ವಿಧಾನ ಪರಿಷತ್‌ನಲ್ಲಿ ನಿತ್ಯ 15 ಪ್ರಶ್ನೆಗಳಿಗೆ ಉತ್ತರ: ಮಲ್ಕಾಪುರೆ

Advertisement

ಬೆಳಗಾವಿ: ಈ ಬಾರಿಯ ಚಳಿಗಾಲದ ಅಧಿವೇಶನ ಡಿಸೆಂಬರ್ 19 ರಿಂದ ಡಿಸೆಂಬರ್ 30 ರವರಗೆ 10 ದಿನಗಳ ಕಾಲ ನಡೆಯಲಿದ್ದು, ವಿಧಾನ ಪರಿಷತ್ತಿನಲ್ಲಿ ದಿನಕ್ಕೆ 15 ಪ್ರಶ್ನೆಗಳಿಗೆ ಸೀಮಿತಗೊಳಿಸಿ ಉತ್ತರ ನೀಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಹೇಳಿದರು
ಇಲ್ಲಿನ ಸುವರ್ಣ ಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟಾರೆ ವಿಧಾನ ಪರಿಷತ್ ಸದಸ್ಯರು 1452 ಪ್ರಶ್ನೆಗಳನ್ನು ಕೇಳಿದ್ದು, ಅವುಗಳನ್ನು 15 ಕ್ಕೆ ಸೀಮಿತಗೊಳಿಸಲಾಗಿದೆ ಎಂದರು.
902 ಚುಕ್ಕೆ ರಹಿತ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡಲಾಗುವುದು
ನಿಯಮ 72 ರಡಿ 127 ಗಮನ ಸೆಳೆಯುವ ಸೂಚನೆ ಮಂಡಿಸಲಾಗಿದೆ. ಸಲ್ಲಿಕೆಯಾಗಿರುವ 330 ಅರ್ಜಿಗಳಲ್ಲಿ 51 ಅರ್ಜಿಗಳು ಸಾರ್ವಜನಿಕ ಮಹತ್ವದ ಅರ್ಜಿಗಳಾಗಿದ್ದು,ಸಮಯದ ಲಭ್ಯತೆ ನೋಡಿಕೊಂಡು ಚರ್ಚಿಸಲಾಗುವುದು. 2 ಖಾಸಗಿ ವಿಧೇಯಕಗಳನ್ನು ಸದಸ್ಯರಾದ ರವಿಕುಮಾರ್ ಹಾಗೂ ವೆಂಕಟೇಶ್ ಮಂಡಿಸಲು ಅರ್ಜಿ ಸಲ್ಲಿಸಿದ್ದು ಪರಿಶೀಲಿಸಲಾಗುವುದೆಂದರು.
ಈ ತಿಂಗಳ 21 ರಂದು ವಿಧಾನ ಪರಿಷತ್ ಸಭಾಪತಿಯವರ ಅವಧಿ ಮುಗಿಯಲಿದ್ದು, ಡಿ.20 ರ ಮಧ್ಯಾಹ್ನ 12 ರ ವರಗೆ ನಾಮ ನಿರ್ದೇಶನಕ್ಕೆ ಅವಕಾಶ ಇದೆ ಎಂದರು.
ಅಧಿವೇಶನದ ಯಶಸ್ಸಿಗೆ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತ ಅಧಿಕಾರಿ ವರ್ಗ ಉತ್ತಮ ವ್ಯವಸ್ಥೆ ಕಲ್ಪಿಸಿದ್ದು ಅಧಿವೇಶನ ಯಶಸ್ವಿಯಾಗಲಿದೆ ಎಂದರು. ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.