ಕೊಪ್ಪಳ: ಕೊಪ್ಪಳ ವಿಮಾನ ನಿಲಾಣಕ್ಕೆ ಕೆಕೆಆರ್ಡಿಬಿ ಮೂಲಕ 40 ಕೋಟಿ ರೂ.ಗಳನ್ನು ನೀಡಿದ್ದು, ಆದಷ್ಟು ಬೇಗನೇ ಭೂ ಸ್ವಾಧೀನ ಕಾರ್ಯವನ್ನು ಪೂರ್ಣಗೊಳಿಸಿ, ವಿಮಾನನಿಲ್ದಾಣಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿದರು.
ಅವರು ಇಂದು ಕೊಪ್ಪಳ ಜಿಲ್ಲೆಯಲ್ಲಿ ಭಾಜಪ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಪ್ಪಳ ಜಿಲ್ಲೆಗೆ ಉತ್ತಮ ಭವಿಷ್ಯವಿದೆ. ಉಕ್ಕು ತಯಾರು ಮಾಡುವ ಅವಕಾಶಗಳಿರುವ ಜಿಲ್ಲೆ. ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಿದ್ದು, ಅದಕ್ಕಾಗಿ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲಾಗುವುದು. ಕನ್ನಡ ನಾಡು ಭಾರತದಲ್ಲಿ ಶೇಷ್ಠ ನಾಡಾಗಿಸಬೇಕು ಎಂದರು.
ಕೊಪ್ಪಳ ಏತ ನೀರಾವರಿ ಯೋಜನೆ ಮಾರ್ಚ್ನಲ್ಲಿ ಪ್ರಾರಂಭ
ಕೊಪ್ಪಳ ಏತ ನೀರಾವರಿ ಯೋಜನೆ ಬಿಜೆಪಿ ಪ್ರಾರಂಭ ಮಾಡಿತು. ಈಗ ಪುನ: ಅದನ್ನು ಪೂರ್ಣಗೊಳಿಸಿ ನೀರು ಕೊಡುವ ಕೆಲಸವನ್ನು ನಮ್ಮ ಸರ್ಕಾರವೇ ಮಾಡಲಿದೆ. ಈ ಯೋಜನೆಗೆ ಆಲಮಟ್ಟಿಯಿಂದ ನೀರ ತರುವುದಿತ್ತು.. ಕೊಪ್ಪಳ ಜಿಲ್ಲೆಗೆ ಕಡೇ ಹಂತದಲ್ಲಿ ನೀರು ಮುಟ್ಟುತ್ತಿರಲಿಲ್ಲ. 1. 8 ಟಿಎಂಸಿ ಗೆ ಹೆಚ್ಚು ಮಾಡಿ ನಾರಾಯಣಪುರಕ್ಕೆ ತಂದು ಮೊದಲು ಕೊಪ್ಪಳ ಜಿಲ್ಲೆಗೆ ಕೊಡಬೇಕೆಂದು ಮಾಡಿದ್ದು ಬಿಜೆಪಿ ಸರ್ಕಾರ. ಇದು ಕೊಪ್ಪಳ ಜಿಲ್ಲೆಗೆ ನಮ್ಮ ಸರ್ಕಾರಕ್ಕಿರುವ ಬದ್ಧತೆ. ಈ ಯೋಜನೆಯನ್ನು ಮಾರ್ಚ್ ತಿಂಗಳಲ್ಲಿ ನೀರು ಕೊಡುವ ಮೂಲಕ ಪ್ರಾರಂಭ ಮಾಡುತ್ತೇವೆ. ಬಹಳ ದಿನಗಳ ಕನಸು ನನಸಾಗುತ್ತಿದ್ದು, ಅದು ಕೇವಲ ಭಾಜಪ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.
ಕರ್ನಾಟಕದ ನೀರಾವರಿಗೆ ಬದ್ಧತೆಯ ಕೆಲಸ
ಸಿಂಗಟಾಲೂರು ಏತ ನೀರಾವರಿ ಯೋಜನೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಅದರ ಸಾಮರ್ಥ್ಯವನ್ನು ಹೆಚ್ಚಿಸಿ ಕೊಪ್ಪಳ ಜಿಲ್ಲೆಗೆ ಅನುದಾನ ವಿನಿಯೋಗಿಸಿ 45 ಸಾವಿರಕ್ಕಿಂತ ಹೆಚ್ಚು ಪ್ರದೇಶದಲ್ಲಿ ನೀರಾವರಿಗೆ ಸೌಲಭ್ಯ ಕಲ್ಪಿಸಿದ್ದು ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ. ಹನಿ ನೀರಾವರಿ ಯೋಜನೆಗೆ ಮಾರ್ಚ್ ತಿಂಗಳಲ್ಲಿ ಅಡಿಗಲ್ಲು ಹಾಕಿ ಈ ಭಾಗದ ಬಹುತೇಕ ಎಲ್ಲಾ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಡೀ ಕರ್ನಾಟಕದ ನೀರಾವರಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ತುಂಗಭದ್ರಾ ಬ್ಯಾಲೆನ್ಸಿಂಗ್ ಜಲಾಶಯಕ್ಕೆ ಅಂತಿಮ ಒಪ್ಪಿಗೆ
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತುಂಗಭದ್ರಾ ಬ್ಯಾಲೆನ್ಸಿಂಗ್ ಜಲಾಶಯದ ಬಗ್ಗೆ ಡಿಪಿಆರ್ ಸಿದ್ಪಡಿಸಲು 20 ಕೋಟಿ ರೂ.ಗಳನ್ನು ಒದಗಿಸಿದ್ದರು. ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಮಾತನಾಡಿದ್ದು, ಅವರ ಅಧಿಕಾರಿಗಳ ತಂಡ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಮತ್ತೊಂದು ಸುತ್ತಿನ ಮಾತುಕತೆಯನ್ನು ಜಲಸಂಪನ್ಮೂಲ ಸಚಿವರು ಮಾಡಿ ಅಂತಿಮ ಒಪ್ಪಿಗೆ ಪಡೆದು ಅಡಿಗಲ್ಲು ಹಾಕಿ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದರು.
ನಿಗದಿತ ಸಮಯದೊಳಗೆ ಅಂಜನಾದ್ರಿ ಬೆಟ್ಟದ ಕಾಮಗಾರಿ ಪೂರ್ಣ
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಹಾಗೂ 40 ಕೋಟಿ ರೂ.ಗಳನ್ನು ಕೆಕೆ.ಆರ್ .ಡಿ ಬಿ ಗೆ ನೀಡಿ ಒಟ್ಟು 140 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿಗಳು ಪ್ರಾರಂಭವಾಗಲಿದೆ. ಸಂಪರ್ಕ ರಸ್ತೆಯನ್ನು ಅಭಿವೃದ್ಧಿಗೊಳಿಸುತ್ತಿದ್ದು, ಯಾತ್ರಿ ನಿವಾಸವನ್ನು ನಿರ್ಮಿಸಲಾಗುತ್ತಿದೆ. ಬೆಟ್ಟದ ಸಮಗ್ರ ಅಭಿವೃದ್ಧಿಗೆ ಈ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಮಾಡಲಿದೆ. ಉತ್ತರ ಭಾರತದಿಂದ ಸಾವಿರಾರು ಜನ ಭಕ್ತರು ಬರುತ್ತಾರೆ. ಮೊನ್ನೆ ನಡೆದ ಉತ್ಸವ ನೋಡಿ ಉತ್ಸಾಹ ಮೂಡಿದೆ. ನಿಗದಿತ ಸಮಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿ
ಶಿಕ್ಷಣಕ್ಕೆ ಒತ್ತು ನೀಡಿ 8000 ಶಾಲಾ ಕೊಠಡಿಗಳನ್ನು ಒಂದೇ ವರ್ಷದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 100 ಆಸ್ಪತ್ರೆಗಳ ಉನ್ನತೀಕರಣ, ರೈತ ವಿದ್ಯಾ ನಿಧಿ, ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಸ್ವಾವಲಂಬಿ, ಸ್ವಾಭಿಮಾನದ ಜೀವನ ನಡೆಸಲು ಅವಕಾಶ ನೀಡಲಾಗುತ್ತಿದೆ. ಸಾಮಾಜಿಕ ನ್ಯಾಯವನ್ನು ನಮ್ಮ ಸರ್ಕಾರ ನೀಡುತ್ತಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆ, ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಕಾಯಕ ಯೋಜನೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸವಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ನಾವು ಮಾಡಬೇಕಿದೆ . ನವ ಕರ್ನಾಟದಿಂದ ನವ ಭಾರತ ನಿರ್ಮಿಸಬೇಕಿದೆ. ಪ್ರಧಾನಿಗಳ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರ್ನಾಟದಿಂದ 1 ಟ್ರಿಲಿಯನ್ ಡಾಲರ್ ಕೊಡುಗೆಯನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೊಳ, ಆನಂದ ಸಿಂಗ್, ಹಾಲಪ್ಪ ಆಚಾರ್, ಮತ್ತಿತರ ಮುಖಂಡರು ಹಾಜರಿದ್ದರು.