ಜನವರಿಯಲ್ಲಿ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶ: ಮಧು ಬಂಗಾರಪ್ಪ

ಮಧು
Advertisement

ದಾವಣಗೆರೆ: ಮುಂಬರುವ ೨೦೨೩ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಚದುರಿ ಹೋಗಿರುವ ಒಬಿಸಿ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ನಗರದ ನಿಜಲಿಂಗಪ್ಪ ಬಡಾವಣೆಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಹಿಂದುಳಿದ ವರ್ಗಗಳ ಮತಗಳು ಪಾರಂಪರಿಕವಾಗಿದ್ದವು. ಆದರೆ, ಈಗ ಎಲ್ಲವೂ ಬದಲಾಗಿದ್ದು, ಆ ಮತಗಳು ಚದುರಿಹೋಗಿವೆ. ಆದ್ದರಿಂದ ಮತ್ತೆ ಆ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯಲು ಘಟಕದಿಂದ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚುನಾವಣೆಗೆ ಸಮಯ ಕಡಿಮೆ ಇರುವುದರಿಂದ ಒಬಿಸಿ ಘಟಕದ ಸಂಘಟನೆಗೆ ಒತ್ತು ನೀಡಿ, ಆ ಮೂಲಕ ಪಕ್ಷಕ್ಕೆ ಶಕ್ತಿ ತುಂಬಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೆ ಬೆಳಗಾವಿ, ಹುಬ್ಬಳ್ಳಿ ಜಿಲ್ಲೆಗಳಿಗೆ ಭೇಟಿ ಮಾಡಿ ಮುಖಂಡರ ಜತೆ ಚರ್ಚಿಸಿದ್ದೇನೆ. ೨೦೨೩ರ ಜ.೧೦ರ ನಂತರ ಜಿಲ್ಲಾವಾರು ಒಬಿಸಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಮಟ್ಟದ ನಾಯಕರ ನೇತೃತ್ವದಲ್ಲಿ ಈ ಸಮಾವೇಶಗಳು ನಡೆಯಲಿವೆ. ಆ ಬಳಿಕ ರಾಜ್ಯಮಟ್ಟದ ಬೃಹತ್ ಸಮಾರಂಭ ನಡೆಸಲಾಗುವುದು. ಈ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕರಾವಳಿಯ ಮೂರು ಜಿಲ್ಲೆಗಳ ರೈತರಿಗೆ ಬೆಂಬಲ ಬೆಲೆ ಜತೆ ೫೦೦ ರೂ. ಹೆಚ್ಚುವರಿ ಪ್ರೋತ್ಸಾಹಧನವನ್ನು ರಾಜ್ಯ ಸರಕಾರ ಘೋಷಿಸಿದೆ. ಆದರೆ, ಅತಿ ಹೆಚ್ಚು ಭತ್ತ ಬೆಳೆಯುವ ಪ್ರದೇಶ ಇರುವ ದಾವಣಗೆರೆ ಜಿಲ್ಲೆ ರೈತರಿಗೆ ಪ್ರೋತ್ಸಾಹಧನ ನೀಡದೆ ವಂಚಿಸಲಾಗಿದೆ. ಈ ಹಿಂದೆ ಕೋಮುಗಳನ್ನು ಒಡೆಯುತ್ತಿದ್ದ ಬಿಜೆಪಿ, ಈಗ ರೈತರನ್ನು ಒಡೆದು ಆಳುತ್ತಿದೆ. ಸೌಲಭ್ಯ ನೀಡುವುದಿದ್ದರೆ ರಾಜ್ಯದ ಎಲ್ಲ ಭತ್ತಬೆಳೆಗಾರರಿಗೂ ನೀಡಬೇಕಿತ್ತು. ಆದರೆ ಬಿಜೆಪಿ ಪ್ರಾಬಲ್ಯ ಇರುವ ಜಿಲ್ಲೆಗಳಿಗೆ ಮಾತ್ರ ಪ್ರೋತ್ಸಾಹಧನ ನೀಡುವುದು ಎಷ್ಟು ಸರಿ? ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಧ್ಯಕ್ಷ ಎಚ್.ಬಿ. ಮಂಜಪ್ಪ, ಪಾಲಿಕೆ ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಪಾಲಿಕೆ ಸದಸ್ಯ ಎ. ನಾಗರಾಜ್, ಕೆ.ಜಿ. ಶಿವಕುಮಾರ್, ಹರಿಶ್ ಬಸಾಪುರ ಇತರರಿದ್ದರು.