ಸಾಮರಸ್ಯ ನಿರ್ವಹಣೆಗೆ ಸಚಿವರ ಸಮಿತಿ ರಚನೆ ಕೇಂದ್ರ ಗೃಹ ಸಚಿವರ ಸೂಚನೆ- ಸಿ.ಎಂ. ಬೊಮ್ಮಾಯಿ

Advertisement

ನವದೆಹಲಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಮರಸ್ಯ ನಿರ್ವಹಣೆಗೆ ತಲಾ ಮೂರು ಸಚಿವರನ್ನು ನೇಮಿಸಿಕೊಳ್ಳಲು ಸೂಚಿಸಿದ್ದಾರೆ. ಗಡಿ ವಿವಾದದ ವಿಷಯಗಳನ್ನು ಬಗ್ಗೆ ಆದಷ್ಟು ಬೇಗನೆ ಚರ್ಚಿಸಿ ಬಗೆಹರಿಸಿಕೊಳ್ಳಲು ಕೇಂದ್ರ ಗೃಹ ಸಚಿವರು ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು

ಅವರು ಇಂದು ನವದೆಹಲಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಇಂದು ಕೇಂದ್ರ ಗೃಹ ಸಚಿವರು ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಚಿವರು, ಸಭೆ ನಡೆಸಲಾಯಿತು. ಗಡಿವಿಚಾರದ ಬಗ್ಗೆ ಮಹಾರಾಷ್ಟ್ರದವರು ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ ಬಗ್ಗೆ ಹಾಗೂ ಇತ್ತೀಚಿನ ಬೆಳವಣಿಗೆ ಬಗ್ಗೆ ಚರ್ಚಿಸಲಾಗಿದೆ. ಎರಡೂ ಪಕ್ಷಗಳ ವಿಚಾರಗಳನ್ನು ಚರ್ಚಿಸಿದ ನಂತರ ಕೇಂದ್ರ ಗೃಹ ಸಚಿವರು ಕೆಲವೊಂದು ಸೂಚನೆಗಳನ್ನು ನೀಡಿರುವುದಾಗಿ ತಿಳಿಸಿದರು.

ಗಡಿವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ :
ಎರಡೂ ರಾಜ್ಯಗಳ ನಡುವೆ ಸಾಮರಸ್ಯ ಇದ್ದು, ಜನರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಗಡಿ ವಿಚಾರದ ಬಗ್ಗೆ ಸಂವಿಧಾನಬದ್ಧವಾಗಿ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದಾಗಲಿ, ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಲೀ, ವ್ಯಾಪಾರ ವಹಿವಾಟುಗಳಿಗೆ ತೊಂದರೆ ಕೊಡುವುದಾಗಲೀ ಮಾಡಬಾರದು. ಎರಡು ರಾಜ್ಯಗಳ ನಡುವೆ ಬರುವ ಸಣ್ಣಪುಟ್ಟ ವಿಚಾರಗಳ ಬಗ್ಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಚಿವರು ಸೇರಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಎರಡೂ ರಾಜ್ಯಗಳು ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿರಬೇಕು. ಗಡಿವಿಚಾರದ ವಾಸ್ತವಾಂಶ, ಪರವಿರೋಧ ನಿಲುವುಗಳೇನೇ ಇದ್ದರೂ, ಎರಡೂ ರಾಜ್ಯಗಳ ರಾಜಕೀಯ ಪಕ್ಷಗಳು ಗಡಿವಿಚಾರದಲ್ಲಿ ಯಾವುದೇ ರಾಜಕಾರಣ ಮಾಡದೇ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಸಚಿವರು ಸ್ಪಷ್ಟವಾದ ನಿರ್ದೇಶನವನ್ನು ನೀಡಿದ್ದಾರೆ. ಜನವರಿಯಲ್ಲಿ ಗಡಿವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬರಲಿದ್ದು, ಮೇಂಟನಬಿಲಿಟಿ ಬಗ್ಗೆಯೂ ಪ್ರಸ್ತಾಪ ಆಗಲಿದೆ ಎಂದರು

ಕಾನೂನು ಸುವ್ಯವಸ್ಥೆ ಕಾಪಾಡಲು ಹಿರಿಯ ಪೊಲೀಸ್ ಅಧಿಕಾರಿ ನೇಮಕಕ್ಕೆ ಸಲಹೆ
ಸಾಮಾನ್ಯವಾಗಿ ಆಗುವ ಕಲ್ಲು ತೂರಾಟ ನಿಯಂತ್ರಿಸಬೇಕು. ಸಾಮಾನ್ಯ ಪೊಲೀಸರಿಗಿಂತಲೂ ಇದೇ ವಿಷಯದ ಬಗ್ಗೆ ಲಕ್ಷ್ಯ ನೀಡಲು ಹಿರಿಯ ಐ.ಪಿ.ಎಸ್ ಅಧಿಕಾರಿಯನ್ನು ನೇಮಿಸಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದರು.

ಯುವಜನೋತ್ಸವಕ್ಕೆ ಪ್ರಧಾನಿಗಳಿಗೆ ಆಹ್ವಾನ
ಉಳಿದಂತೆ ಪಕ್ಷದ ಸಂಘಟನೆ, ಜನಸಂಕಲ್ಪ ಯಾತ್ರೆ, ಪ್ರಧಾನಿ ಹಾಗೂ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡುವ ದಿನಾಂಕಗಳನ್ನು ಚರ್ಚಿಸಲಾಯಿತು. ಪ್ರಧಾನಿಗಳು ಇನ್ನು ಮುಂದೆ ಹೆಚ್ಚಿನ ಸಮಯವನ್ನು ಸಹಜವಾಗಿ ನೀಡಲಿದ್ದು, ಹಲವಾರು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.

ಯುವಜನೋತ್ಸವ
ಜನವರಿ 12 ರಂದು ಯುವಜನೋತ್ಸವವನ್ನು ಹಮ್ಮಿಕೊಳ್ಳಲು ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಚರ್ಚಿಸಲಾಗುತ್ತಿದೆ. ಈ ಕಾರ್ಯಕ್ರಮ ಕ್ಕೆ ಪ್ರಧಾನಿಗಳನ್ನು ಆಹ್ವಾನಿಸುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

ಸಚಿವ ಸಂಪುಟ ರಚನೆಯ ಬಗ್ಗೆ ಚರ್ಚಿಸಲು ಸಮಯ ಕೋರಲಾಗಿದೆ. ಸಚಿವ ಸಂಪುಟ ರಚನೆಯ ಅವಶ್ಯಕತೆಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ ಎಂದರು.

ಪೆನ್ನಾರ್ ನದಿ ನೀರು:
ಪೆನ್ನಾರ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ 3 ತಿಂಗಳಲ್ಲಿ ರಚನೆ ಮಾಡಲು ಸುಪ್ರೀಂಕೋರ್ಟ್ ತಿಳಿಸಿದೆ. ಇದು ಸಣ್ಣ ವಿಚಾರವಾಗಿದ್ದು, ಪ್ರಾಧಿಕಾರ ರಚನೆ ಬೇಡ ಎಂದಿದ್ದೇವೆ. ನಮ್ಮ ನಿಲುವನ್ನು ಸುಪ್ರೀಂಕೋರ್ಟ್ನಲ್ಲಿ ನಾವು ಮರುಪರಿಶೀಲನಾ ಅರ್ಜಿ ಸಲ್ಲಿಸಲಿದ್ದೇವೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದರು.