ಪ್ರಶಸ್ತಿ ಬೇಕಾ? ಗೌರವ ಪದವಿ ಬೇಕಾ? ನಿಮ್ಮ ಹೆಸರಿನ ಮುಂದೆ ಪ್ರಶಸ್ತಿ ಪುರುಸ್ಕೃತರು ಎಂಬ ವಿಶೇಷಣ ಹಚ್ಚಿಕೊಳ್ಳುವ ಆಸೆಯಾ? ಇಂಥವರಿಗೆ ಈಗ ಮುಕ್ತ ಕಾಲ!
ನೀವು ಯಾರೇ ಇದ್ದಿರಬಹುದು. ಸಜ್ಜನರೋ, ದುರ್ಜನರೋ, ಸಮಾಜ ಸೇವಕರೋ, ಕಂಟಕರೋ, ಬಂಡವಾಳಶಾಹಿಗಳೋ, ಗುತ್ತಿಗೆದಾರರೋ, ಪಾತಕಿಗಳೋ, ಪಾಪದ ಜೀವಗಳೋ… ಯಾರೇ ಆಗಿರಬಹುದು, ರಾಜ್ಯ ಅಂತರಾಜ್ಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಭಾಜನರಾಗಬಹುದು. ಆ ಪ್ರಶಸ್ತಿಗಳ ಮೌಲ್ಯ' ಎಷ್ಟೋ ಅಷ್ಟು ತೆತ್ತರಾಯಿತು. ಎಷ್ಟು
ಮೌಲ್ಯ’ ತೆತ್ತುತ್ತೀರೋ ಅಷ್ಟು ದೊಡ್ಡ ವೇದಿಕೆಯಲ್ಲಿ ಮತ್ತು ದೊಡ್ಡ ವ್ಯಕ್ತಿಗಳಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಅಷ್ಟೇ ಅಲ್ಲ. ನಿಮ್ಮ ಕುರಿತು ನೀವು ಮಾಡದಿರುವ ಘನಂಧಾರಿ ಕಾರ್ಯಗಳನ್ನೆಲ್ಲ ಸೇರಿಸಿ ಟಿವಿ ಪರದೆಗಳ ಮೇಲೆ ವಿಶೇಷಣಗಳೊಂದಿಗೆ ಬಣ್ಣಿಸಿ ತಾರಾ ಹೊಟೇಲ್ ಪ್ರಶಸ್ತಿ ವಿತರಿಸಿಲ್ಲದೇ, ನಿಮಗೆ ಗಣ್ಯಾತಿ ಗಣ್ಯರಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸುತ್ತಾರೆ. ಅಭಿನಂದನೆಗಳ ಮಹಾಪೂರ ಕಂಡು ಜನರೆಲ್ಲರೂ ಮೂಗಿನ ಮೇಲೆ ಕೈ ಇಟ್ಟುಕೊಂಡು ಅಬ್ಬಾ ಇಂತಹ ಪ್ರಶಸ್ತಿ ಪುರಸ್ಕೃತರು' ಎಂದು ಉದ್ಗರಿಸುತ್ತಾರೆ. ನಿಜ. ಈಗ ಪುರಸ್ಕಾರ, ಪ್ರಶಸ್ತಿ ನಿಮ್ಮ ಮನೆ ಬಾಗಿಲಿಗೇ ಒದ್ದುಕೊಂಡು ಬರುವ ಕಾಲ. ಯಾವ ಪ್ರಶಸ್ತಿ ಬೇಕು? ಎಂತಹ ಹೆಸರಿನ ಪ್ರಶಸ್ತಿ ಬೇಕು ಹೇಳಿ? ಆ ಅವಾರ್ಡ್ ಮತ್ತು ವೇದಿಕೆ ಸಿದ್ಧವಾಗುತ್ತದೆ. ಈ ಮೊದಲು ಸರ್ಕಾರ ಕೊಡುವ ಪ್ರಶಸ್ತಿಗಳಿಗೆ ಲಾಬಿ ನಡೆಯುತ್ತಿತ್ತು. ಸರ್ಕಾರ, ಅಕಾಡೆಮಿಗಳು, ಪ್ರತಿಷ್ಟಿತ ಸಂಘ ಸಂಸ್ಥೆಗಳ ಮತ್ತು ಮಠ ಮಾನ್ಯದ
ಧೀಮಂತ’ ಪ್ರಶಸ್ತಿ ಪಡೆಯಲು ಲಾಬಿ ಶುರುವಾಗುತ್ತಿತ್ತು. ಹಾಗೇ ವಿ.ವಿ ಗಳ ಗೌರವ ಡಾಕ್ಟರೇಟ್ಗಂತೂ ಇನ್ನಿಲ್ಲದ ಲಾಬಿ, ಒತ್ತಡ.. ಸಾಕಷ್ಟು ವಿವಾದ ಸಂಘರ್ಷಗಳೂ ಉಂಟಾದದ್ದುಂಟು..
ಹೆಚ್ಚು ಕಾಲದಿಂದಲ್ಲ. ಒಂದು ಪ್ರಶಸ್ತಿ ಬಂತೆಂದರೆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತಿತ್ತು. ಅಂದರೆ ಪ್ರಶಸ್ತಿ ಪಡೆದವರು, ಆಯ್ಕೆ ಮಾಡುವವರು ಎಲ್ಲರಿಂದಲೂ ಗೌರವಿಸಲ್ಪಡುವಂಥರಾಗಿರುತ್ತಿರು. ಅಪಸ್ವರ ಕೇಳಿ ಬರುತ್ತಿರಲಿಲ್ಲ. ಪ್ರಶಸ್ತಿಗಳೇ ಅಂಥವರನ್ನು ಹುಡುಕಿಕೊಂಡು ಬರುತ್ತಿವು. ಪ್ರಶಸ್ತಿಯ ಆಯ್ಕೆ ವಿಧಾನ ನಿಸ್ಪಹ ಪ್ರೇರಣೆಯಿಂದ ಜರುತ್ತಿತ್ತು.
ಆದರೆ ಈಗ ಪ್ರಶಸ್ತಿ, ಗೌರವ ಡಾಕ್ಟರೇಟ್, ಪುರಸ್ಕಾರಗಳು ಮಾರಾಟವಾಗುತ್ತಿವೆ. ಇದು ಪಕ್ಕಾ ದಂಧೆಯಾಗಿದೆ. ಅಷ್ಟೇ ಅಲ್ಲ. ವ್ಯಾಪಾರವೂ ಆಗಿದೆ. ವರ್ಷವಿಡೀ ಪ್ರಶಸ್ತಿ ಕೊಡುವುದಕ್ಕಾಗಿಯೇ ಕೆಲ ಸಂಘ ಸಂಸ್ಥೆಗಳು, ಗುಂಪುಗಳು, ಮಾಧ್ಯಮಗಳು ಹುಟ್ಟಿಕೊಂಡಿವೆ. ಹಾಗೆ ನೋಡಿದರೆ ಈಗಿದು ನೂರಾರು ಕೋಟಿ ರೂಪಾಯಿಗಳ ವ್ಯವಹಾರ! ಪ್ರಶಸ್ತಿ ಪುರಸ್ಕಾರ ನೀಡುವ ಸಂಘಟನೆಗಳು ಅಥವಾ ಸಂಸ್ಥೆಗಳ ಮೇಲೆ ಮತ್ತು ಭಾಜನರಾದವರ ಮೇಲೆ ಜಿಎಸ್ಟಿ ಕಣ್ಣು ಬಿದ್ದಿಲ್ಲವೇಕೋ..! ಸರ್ಕಾರದ ಬೊಕ್ಕಸಕ್ಕೂ ಆದಾಯ ಬರುತ್ತಿತ್ತಲ್ಲವೇ?
ಯಾವ ಪ್ರಶಸ್ತಿ ಬೇಕು? ಸಾಮಾಜಿಕ ರತ್ನ, ಸಾಮಾಜಿಕ ಸಾಮ್ರಾಟ, ಮಾನವತಾವಾದಿ, ರಾಷ್ಟ್ರೀಯ ನೇತಾರ, ಸಮಾಜ ಸೇವಕ, ಧೀಮಂತ ರತ್ನ, ಸಮಾಜ ಸುಧಾರಕ, ಮಹಾತ್ಮಾ ಗಾಂಧಿ, ಪ್ರಿಯದರ್ಶಿನಿ, ಯುವ ಕಣ್ಮಣಿ, ಉದ್ಯೋಗ ರತ್ನ, ಡಾ.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ, ರಾಯಣ್ಣ, ರಾಷ್ಟ್ರೀಯ- ಅಂತಾರಾಷ್ಟ್ರೀಯ ಅವಾರ್ಡ್ ಯಾವುದು ಬೇಕು ಹೇಳಿ.. ಕುವೆಂಪು, ನೃಪತುಂಗ, ತೇಜಸ್ವಿ ಬೇಂದ್ರೆ ಈ ಹೆಸರಿನ ಅವಾರ್ಡ್ ಸ್ವಲ್ಪ ಕಾಸ್ಟ್ಲೀ… ಇನ್ನು ಮಾಧ್ಯಮ ಸಂಸ್ಥೆಗಳು ನೀಡುವ ಪ್ಯಾಕೇಜ್' ಸಾಧಕರು, ಜನಾನುರಾಗಿ ಅವಾರ್ಡ್ ಬೇಕಾ... ಹೀಗೆ ಯಾವುದು ಬೇಕು ಹೇಳಿ? ಅವೆಲ್ಲ ಕೊಡುವುದಕ್ಕಾಗಿ ಸಿದ್ಧವಾಗಿವೆ. ನಿಮಗಾಗಿ ! ಆದರೆ ಎಲ್ಲವಕ್ಕೂ ನೀವು ಲಕ್ಷಾಂತರ ರೂಪಾಯಿ ಪೀಕಿ ತೆಗೆದುಕೊಳ್ಳಬೇಕು ಅಷ್ಟೇ !! ಈಗ ಪ್ರಶಸ್ತಿ ಪುರಸ್ಕಾರವೂ ಒಂದು ಬ್ಯುಸಿನೆಸ್. ಆದಾಯದ ಮೂಲ. ವ್ಯವಹಾರ. ಮುಕ್ತ ಮಾರುಕಟ್ಟೆ. ಯಾವುದು- ಎಂತಹ ಪ್ರಶಸ್ತಿ ಪುರಸ್ಕಾರ ಬೇಕೋ ಅವೆಲ್ಲವನ್ನೂ ಕೂಡ ಪ್ರಶಸ್ತಿ ಅಪೇಕ್ಷಿಸುವವರೇ ನಿರ್ಧರಿಸಿ ಕೊಂಡುಕೊಳ್ಳಬಹುದು. ಈ ಮೊದಲು ಸರ್ಕಾರಿ ಪ್ರಶಸ್ತಿ ಹಾಗೂ ವಿವಿಧ ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಲಾಬಿ- ವ್ಯವಹಾರ ನಡೆಯುತ್ತಿತ್ತು. ಪ್ರತಿಷ್ಟಿತರು ತಮಗೆ ಗೌರವ ಡಾಕ್ಟರೇಟ್ ಬೇಕೆಂಬ ಕಾರಣಕ್ಕೆ ಲಾಬಿ ಮಾಡುತ್ತಿರು. ಇದಕ್ಕಾಗಿಯೇ ಬಹಿರಂಗ ಸಮರ ಸಾರಿದವರು, ನ್ಯಾಯಾಲಯದ ಮೆಟ್ಟಿಲು ಹತ್ತಿದವರೂ ಇದ್ದಾರೆ. ಇದನ್ನು ಮನಗಂಡೇ ದೇಶದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಡಾಕ್ಟರೇಟ್ ಕೊಡುವ ಬೃಹತ್ ಸಂಸ್ಥೆಗಳು ಹುಟ್ಟಿಕೊಂಡಿವೆ. ಅವರ ಸಾಧನೆ ಏನೇ ಇರಲಿ. ಏನೂ ಇಲ್ಲದೆಯೂ ಇರಲಿ. ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಇದಕ್ಕಾಗಿಯೇ ಸಿಂಗಪುರ, ಥೈವಾನ್, ಬ್ಯಾಂಕಾಕ್, ಆಷ್ಟೇಲಿಯಾ, ಕೆನಡಾ, ಮಾಲ್ಡೀವ್ ಇತ್ಯಾದಿಗಳಲ್ಲಿ ಹತ್ತು ವರ್ಷಗಳ ಹಿಂದೆಯೇ ಡಾಕ್ಟರೇಟ್ ನೀಡುವ ದಂಧೆ ಶುರುವಾಗಿದೆ. ನಮ್ಮವರೂ ಹಿಂದೆ ಬಿದ್ದಿಲ್ಲ. ಅಸ್ತಿತ್ವವೇ ಇಲ್ಲದ ವಿ.ವಿಗಳಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿವೆ. ನಕಲಿ ವಿ.ವಿ ಬಿಡಿ, ಆರೇಳು ದಶಕಗಳ ಪ್ರತಿಷ್ಠಿತ ವಿ.ವಿ ಗಳೂ ಯಾರೆಲ್ಲರಿಗೆ ಗೌರವ ಡಾಕ್ಟರೇಟ್ ಪಡೆದಿದ್ದಾರೆಂಬ ಪಟ್ಟಿ ತೆಗೆದರೆ ಹೌದಾ ಎಂದು ನಿಬ್ಬೆರಗಾಗುವ ಸಂದರ್ಭ. ಅವರ ಅರ್ಹತೆ ಪ್ರಶ್ನೆ ಬಿಡಿ. ಆ ವಿಶ್ವವಿದ್ಯಾಲಯದ ಮಾನ ಮರ್ಯಾದೇ ಹರಾಜು ಹಾಕಿದ್ದು ಈ ಲಾಬಿಯೇ. ಮಧ್ಯಪ್ರದೇಶ, ಉತ್ತರ ಪ್ರದೇಶ, ಚೆನ್ನೈ ಮೊದಲಾದೆಡೆ ಗೌರವ ಡಾಕ್ಟರೇಟ್ ಕೊಡುವ ನಕಲಿ ಜಾಲವೇ ಇದೆ. ಈಗ ಅದು ಕರ್ನಾಟಕಕ್ಕೂ ಕಾಲಿಟ್ಟಿದೆ. ಚೆನ್ನೈನ ಬೊಗಸ್ ವಿವಿ ಮಂಡ್ಯದಲ್ಲಿ ಒಂದೇ ವರ್ಷದಲ್ಲಿ ೩೫೦ಕ್ಕೂ ಹೆಚ್ಚು ಜನರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಈಗ ಅವರೆಲ್ಲ ತಮ್ಮ ಹೆಸರಿನ ಮುಂದೆ ಡಾ. (ಡಾಕ್ಟರ್) ಹಾಕಿಕೊಳ್ಳುತ್ತಾರೆ! ಕೆಲವರಲ್ಲಿ ಈ ಪ್ರಶಸ್ತಿ ಕ್ರೇಜ್ ಹೆಚ್ಚಿರುವುದು ತಿಳಿಯುತ್ತಿಂತೇ ಅವಾರ್ಡ್ ಮಾಫಿಯಾ ಕ್ಷಿಪ್ರವಾಗಿ ಬೆಳೆಯಿತು. ಇದಕ್ಕೆ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಸಿನೆಮಾ ಅವಾರ್ಡ್ ಕಾರ್ಯಕ್ರಮಗಳು ಕಾರಣ. ಅಲ್ಲಿನ ಸೂಟು ಬೂಟಿನ ಠೀಕು ಟಾಕು, ಝಗಮಗ, ತಾರೆಯರ ಛಮಕು, ಮೋಜು ಮಸ್ತಿ ಎಲ್ಲವನ್ನೂ ಕಂಡು ವಿವಿಧ ಕಾರ್ಪೋರೇಟ್ ಸಂಸ್ಥೆಗಳೇ ತಾವೂ ಅವಾರ್ಡ್ ಕೊಡುವ ಕೆಲಸಕ್ಕಿಳಿದವು. ಇದರಿಂದ ಎರಡು ಲಾಭ. ಒಂದು, ತಮ್ಮ ಸಿಎಸ್ಆರ್ ಅನುದಾನ ಮತ್ತು ಸಾರ್ವಜನಿಕ ಸಂಪರ್ಕ ಹೆಚ್ಚಾಗುವುದು ಒಂದಾದರೆ, ಎರಡನೆಯದ್ದು ಅವಾರ್ಡ್ ಘೋಷಣೆ ಹಿನ್ನೆಲೆಯಲ್ಲಿ ದೊರೆಯುವ ಪುಕ್ಕಟೆ ಪ್ರಚಾರ. ರಿಯಲ್ ಎಸ್ಟೇಟ್ ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ಕೈಗಾರಿಕೋ ದ್ಯಮಗಳು, ಸೌಂದರ್ಯ ವರ್ಧಕ ಪ್ರಸಾಧನಗಳು, ಅಲಂಕಾರಿಕ ವಸ್ತುಗಳ ಉತ್ಪಾದಕ ಕಂಪನಿಗಳೆಲ್ಲ ನೇರವಾಗಿ ಅಥವಾ ಪ್ರಾಯೋಜಕರಾಗಿ ಇಂತಹ ಪ್ರಶಸ್ತಿಗಳನ್ನು ಕೊಡಿಸುತ್ತಿವೆ. ಮಿಸ್ ಇಂಡಿಯಾದಿಂದ ಹಿಡಿದು- ಮಾಸ್ಟರ್ ಬಾಯ್, ಚೆಂದದ ಬೇಬಿವರೆಗೆ, ಬೆಸ್ಟ್ ಅಚೀವರ್ ನಿಂದ ಬೆಸ್ಟ್ ಬಾಡಿ ಬಿಲ್ಡ್ರ್ ಅವಾರ್ಡ್ ಇತ್ಯಾದಿಗಳನ್ನು ಏರ್ಪಡಿಸುತ್ತಿವೆ. ಈಗ ಇದರೊಟ್ಟಿಗೆ ಮಾಧ್ಯಮ ಕ್ಷೇತ್ರವೂ ಧುಮುಕಿದೆ. ಮೊದಲು ರಾಷ್ಟ್ರೀಯ ಚಾನಲ್ಗಳು ಪ್ರಾಯೋಜಕತ್ವ ಪಡೆದು ವಿವಿಧ ಕ್ಷೇತ್ರದ ಗಣ್ಯರನ್ನು ಹುಡುಕಿ ಅವಾರ್ಡ್ ಕೊಡುತ್ತಿವು. ಈಗ ಪ್ರಾದೇಶಿಕ ಭಾಷಾ ಚೆನಲ್ಗಳು ಬೆಸ್ಟ್ ಅಚೀವರ್, ಗೆಮ್ ಚೇಂಜರ್, ಕರ್ನಾಟಕದ ರತ್ನ, ಐಕಾನ್ ಇತ್ಯಾದಿ
ಪ್ಯಾಕೇಜ್ ಅವಾರ್ಡ್’ ನೀಡುತ್ತಿವೆ. ಪ್ರಸಸ್ತಿ ಪಡೆಯುವವರೇ ಮಾಧ್ಯಮ ಸಂಸ್ಥೆ ನಿರ್ಧರಿಸುವ ಮೊತ್ತ' ನೀಡಿ ಅವಾರ್ಡ್ ಪಡೆಯುವುದು! ಅವಾರ್ಡ್ ಪ್ಯಾಕೇಜ್ ಸ್ವರೂಪದಲ್ಲಿರುತ್ತದೆ. ಇಷ್ಟು ಜಾಹೀರಾತು, ಪರಿಚಯ ಪುಸ್ತಕ, ಸಾಧನೆ ಬಿಂಬಿಸುವ ವೀಡಿಯೋ, ಆ ವೀಡಿಯೋ ಕ್ಲಿಪ್ಪಿಂಗ್, ಪ್ರತಿಷ್ಠಿತ ವ್ಯಕ್ತಿ ಅಥವಾ ಸಿನಿಮಾ ನಟ ನಟಿಯರಿಂದ ತಾರಾ ಹೊಟೇಲ್ನಲ್ಲಿ ಪ್ರಶಸ್ತಿ ಪ್ರದಾನ ಎಲ್ಲವೂ ಸೇರಿ ಲಕ್ಷಾಂತರ ರೂಪಾಯಿ ಎಂದು ಹೇಳಿ ಯಾರು ಈ ಪ್ಯಾಕೇಜ್ ನೀಡುತ್ತಾರೋ ಅವರಿಗೆಲ್ಲ ಅವಾರ್ಡ್ ಕೊಡುವ ಮಾಧ್ಯಮ ದಂಧೆ ಇತ್ತೀಚಿನ ದಿನಗಳಲ್ಲಿ ಆರಂಭವಾಗಿದೆ. ಈ ಅವಾರ್ಡ್ ಪಡೆಯುವವನು ಎಂಥವನೇ ಇದ್ದಾನು. ಮಾದಕ ದ್ರವ್ಯಗಳ ಸಾಗಾಟದಿಂದ ಹಿಡಿದು ಭೂಗತಲೋಕದ ಸಂಪರ್ಕದವನು, ರಿಯಲ್ ಎಸ್ಟೇಟ್ ಉದ್ಯಮಿ, ವೈದ್ಯರು, ಗುತ್ತಿಗೆದಾರರು, ಎಂ.ಪಿ, ಎಂಎಲ್ಎ ಆಗಬೇಕು ಎನ್ನುವವರು, ಮಠ- ದೇವಸ್ಥಾನಗಳ ವ್ಯವಸ್ಥಾಪಕರು, ಯಾರೇ ಆದೀತು. ಅವರೆಲ್ಲರಿಗೆ ಬಿರಿದು ಬಾವಲಿಯನ್ನಿತ್ತು ಅಪ್ರತಿಮ ಸಾಹಸಿ, ಯಾರೂ ಕಂಡು ಕೇಳರಿಯದ ಯಶಸ್ವಿ ಸಾಧಕ, ಭಾರೀ ಮಾನವತಾ ವಾದಿ. ಪರಿಸರ ಪ್ರೇಮಿ, ಜೀವಮಾನ ಸಾಧಕ ಇತ್ಯಾದಿ ಪ್ರಶಸ್ತಿ ನೀಡಿ ಅವರ ಸಾಧನೆಯನ್ನು ಕೊಂಡಾಡಲಾಗುತ್ತದೆ.
ಪ್ಯಾಕೇಜ್’ ಒಂದೇ ಈ ಪ್ರಶಸ್ತಿಯ ಮಾನದಂಡ!
ಈ ಪ್ಯಾಕೇಜ್ ಪ್ರಶಸ್ತಿಯನ್ನು ಕೆಲವರಂತೂ ನಾಲ್ಕೈದು ಕಡೆಯಿಂದ ಪಡೆದವರಿದ್ದಾರೆ. ಪ್ರಶಸ್ತಿ ಕೊಡುತ್ತೇವೆ. ಇಷ್ಟು ಹಣ ಕೊಡಿ ಎಂದರೆ ಬಾರ್ಗೇನ್ ಮಾಡಿಸಿ, ವ್ಯವಹಾರ ಕುದುರಿಸಿ ತಮ್ಮ ಆಸ್ತಿಪಾಸ್ತಿ ಪ್ರದರ್ಶಿಸಿ ತಮ್ಮಂಥ ಸಮಾಜ ಸುಧಾರಕರೆಂದು ಬಿಂಬಿಸಿಕೊಳ್ಳುತ್ತಾರೆ. ದಂಧೆ ಇರುವುದೇ ಬೇರೆ. ಪ್ರಶಸ್ತಿ ಪಡೆಯುವಾಗಿನ ಮುಖವೇ ಬೇರೆ.
ಪ್ರಶಸ್ತಿ ಕ್ರೇಜ್ ಹೇಗಿದೆ ಎಂದರೆ ಯಾರೇ ಎಷ್ಟೇ ದೂರದವರೇ ಪ್ರಶಸ್ತಿ ಕೊಡುತ್ತಾರೆಂದರೆ ತಕ್ಷಣ ಸಂಪರ್ಕಿಸಿ ವ್ಯವಹಾರ ಕುದುರಿಸಿ ಅವಾರ್ಡ್ ಪಡೆಯುವ ತಂಡವೇ ಇದೆ. ಈಗಂತೂ ಗ್ರಾಮೀಣ ಮಟ್ಟಕ್ಕೆ ತೆರಳಿ ದೊಡ್ಡ ಲ್ಯಾಂಡ್ ಲಾರ್ಡ್ಗೆ ಗ್ರಾಮೀಣ ನೇತಾರ, ಮಾದರಿ ಕೃಷಿಕ, ಸಮಾಜ ಸುಧಾರಕ ಅವಾರ್ಡ್ ಕೊಡಿಸುವ ಮಟ್ಟಕ್ಕೆ ಹೋಗಿದೆ. ಎತ್ತು, ಎಮ್ಮೆ, ನಾಯಿಗಳಿಗೂ ಅವಾರ್ಡ್ ಕೊಡಿಸುವ ಸಂಪ್ರದಾಯ ಬೆಳೆದಿದೆ !
ಹಿಂದೆ ಸಾಹಿತ್ಯ, ಸಂಗೀತ, ಕಲೆ, ಸಮಾಜ ಸೇವೆಗಳಿಗೆ ತಮ್ಮ ಸಾಧನೆಯಿಂದಲೇ ಪ್ರಶಸ್ತಿ ಪಡೆದವರು ಈಗ ತಾವು ಪ್ರಶಸ್ತಿ ಪುರಸ್ಕೃತರೆಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದಾರೆ. ನಿಮ್ಮ ಬಳಿ ದುಡ್ಡಿದೆಯೇ? ನಿಮಗೊಂದು ಪ್ರಶಸ್ತಿ ಎನ್ನುವುದು ಈಗ ಘೋಷಿತ ವಾಕ್ಯವಾಗಿದೆ. ಇಬ್ಬರು ಅವಾರ್ಡ್ಗಳು ಭೇಟಿಯಾದರೆ, ನಿಮ್ಮದೆಷ್ಟರ ಪ್ಯಾಕೇಜ್ ಎಂದು ಪರಸ್ಪರ ಕೇಳಿಕೊಳ್ಳುತ್ತ, ಕೈಹೊಸೆದುಕೊಳ್ಳುತ್ತ, ಪ್ರಶಸ್ತಿ ಕೊಟ್ಟವರೊಂದಿಗೆ ತಗಾದೆ ತೆಗೆದ ಪ್ರಸಂಗವೂ ಉಂಟಂತೆ..
ಚಂದ್ರಶೇಖರ ಪಾಟೀಲ (ಚಂಪಾ) ಹಿಂದೊಮ್ಮೆ ಹೇಳಿದ್ದರು. ಪ್ರಶಸ್ತಿ ಪಡೆದುಕೊಳ್ಳುವುದಕ್ಕೆ ನಮಗೆ ನಾಚಿಕೆ- ಮುಜುಗರ ಆಗುತ್ತದೆ. ಏಕೆಂದರೆ ಅದರ ಮೌಲ್ಯ (ಕೊಡುವವರದ್ದು ಮತ್ತು ಪಡೆಯುವವರದ್ದು) ಅಷ್ಟು ಹೆಚ್ಚಾಗಿದೆ. ನಮ್ಮಿಂದ ಸಾಧ್ಯವಿಲ್ಲಪ್ಪ ಎಂದು.
ಪ್ರಶಸ್ತಿ ಹುಡುಕಿಕೊಂಡು ಬರುವುದಿಲ್ಲ ಎಂಬುದು ಹಳಸಿದ ಮಾತು. ಈಗ ಪ್ರಶಸ್ತಿಯೇ ಹುಡುಕಿಕೊಂಡು ಬರುತ್ತದೆ. ನಿಮಗಾವ ಪ್ರಶಸ್ತಿ, ಪದವಿ, ಗೌಡಾ ಬೇಕು ಹೇಳಿ? ಯಾವ `ಭೂಷಣ''ರಾಗಲು ಇಚ್ಛಿಸಿದ್ದೀರಿ ಹೇಳಿ? ಯಾಕೆಂದರೆ ಪ್ರಶಸ್ತಿ ನೀಡಿಕೆಯೇ ಒಂದು ಉದ್ಯಮ! ಗವಿಮಠದ ಸ್ವಾಮೀಜಿ ವರ್ಷದ ಹಿಂದೆ ಒಂದು ಪ್ರಕಟಣೆ ನೀಡಿದ್ದರು. ಯಾರೂ ನಮ್ಮ ಹೆಸರನ್ನು ಯಾವುದೇ ಪ್ರಶಸ್ತಿ, ಪುರಸ್ಕಾರಕ್ಕೆ ಶಿಫಾರಸು ಮಾಡಬಾರದು... ನಾವು ಯಾವ ಪ್ರಶಸ್ತಿಯನ್ನೂ ಸ್ವೀಕರಿಸುವುದಿಲ್ಲ.... ಅಂತಹ ಯಾವ ಸಾಧನೆ ಮಾಡಿದವರಲ್ಲ.... ಸಾಧಕರನ್ನೂ ಸಂಶಯದಿಂದ ನೋಡುವಂತಾಯಿತಲ್ಲ! ಹಾಗಂತ ಎಲ್ಲ ಪ್ರಶಸ್ತಿಗಳೂ ಹಾಗಿಲ್ಲ. ಪ್ರಾಯೋಜಕತ್ವ ಪಡೆದು ಅರ್ಹರಿಗೆ ಪ್ರಶಸ್ತಿ ನೀಡುವ ಸಂಸ್ಥೆಗಳೂ ಇವೆ. ಇಂಥ ವುಗಳ ಸಂಖ್ಯೆ ಕಡಿಮೆಯಾಗಿದೆಯಷ್ಟೇ. ಪರಿಣಾಮ
ಬೇಕಾ ನಿಮಗೊಂದು ಪ್ರಶಸ್ತಿ’ ಎಂದು ಕೇಳುವ ಹಂತಕ್ಕೆ ಇಳಿದಿರುವವರ ಹಾಗೂ ಇವನ್ನು ಬಾಚಿ ತಬ್ಬಿಕೊಳ್ಳುವವರ' (ಹಾಂ. ದುಡ್ಡು ನೀಡಿ ಎಂಬುದು ಗೊತ್ತಿರಲಿ) ಸಂಖ್ಯೆಯೇ ಢಾಳಾಗಿ ಗೋಚರಿಸುತ್ತಿದೆ. ಹೊಸ ತಲೆಮಾರಿಗೆ ಎಲ್ಲವೂ ಅರ್ಥವಾಗುವ ಕಾಲಘಟ್ಟವಿದು. ಹೀಗಿರುವಾಗ ಪ್ರಶಸ್ತಿ- ಪುರಸ್ಕಾರಗಳಿಗೆ ಕನಿಷ್ಟ ಮಟ್ಟದ
ಗೌರವ’, `ಮರ್ಯಾದೆ’ ತರುವ ಕೆಲಸವಾದೀತೇ? ಇದು ಅರ್ಹರೆಲ್ಲರ ಮನಸ್ಸಿನ ಒಳಗೇ ಉತ್ತರಕ್ಕಾಗಿ ಹುಡುಕುತ್ತಿರುವ ಪ್ರಶ್ನೆ… ಅಥವಾ ಹೀಗಾಗಲಿ ಎಂಬ ಸಜ್ಜನ ನಿರೀಕ್ಷೆ.