ವಂದೇ ಮಾತರಂ ಹಾಡನ್ನು ತಡೆಯುವ ಸಾಮರ್ಥ್ಯವಿದೆಯೇ

Advertisement

ಸಾಧನೆ, ಸವಾಲು, ಸೋಲು, ಗೆಲುವುಗಳ ಸಹಸ್ರಮಾನದ ಕಥೆ ಭಾರತದ ಸ್ವಾತಂತ್ರ‍್ಯ ಹೋರಾಟ. ಆಕ್ರಮಣಕಾರರಾಗಿ ಬಂದ ದುರುಳರಿಗೆ ತಲೆಬಾಗದೆ ಖಡ್ಗದಲ್ಲುತ್ತರಿಸಿದ ಕ್ಷಾತ್ರಪರಂಪರೆ ನಮ್ಮದು. ತಕ್ಕಡಿ ಹಿಡಿದು ಹಿಂದುಸ್ಥಾನವನ್ನು ಸುಲಭವಾಗಿ ಕಬಳಿಸಬಹುದೆಂಬ ಯೋಚನೆಯೊಂದಿಗೆ ಬಂದು ಸಿರಿಸಂಪತ್ತನ್ನೆಲ್ಲ ದೋಚಿ ರಾಜ್ಯಾಧಿಕಾರ ಸ್ಥಾಪಿಸಲು ಹವಣಿಸಿದ ಆಂಗ್ಲರ ಹಾದಿ ಹೆಜ್ಜೆಹೆಜ್ಜೆಗೂ ಕಠಿಣವಾಗಿತ್ತು. ಮರಾಠರು, ಪೇಶ್ವೆಗಳ ನಿರ್ಭೀತ ಹೋರಾಟ, ೧೮೫೭ರ ಸ್ವಾತಂತ್ರ‍್ಯ ಸಂಗ್ರಾಮದ ತರುವಾಯ ನಡೆದ ಫಡಕೆಯ ಸಶಸ್ತ್ರ ಕ್ರಾಂತಿ, ಛಾಫೇಕರರ ಮುಯ್ಯಿಗೆ ಮುಯ್ಯಿ ಬ್ರಿಟಿಷರ ನಿದ್ದೆಗೆಡಿಸಿತ್ತು. ಪ್ರಖರ ರಾಷ್ಟ್ರೀಯತೆ, ಉನ್ನತ ಆಧ್ಯಾತ್ಮ, ಕ್ರಾಂತಿಗಾಥೆಯಿಂದ ಭಾರತೀಯತೆಯ ಕೇಂದ್ರವಾದ ಬಂಗಾಲ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಸಮಗ್ರದೇಶದ ಶಕ್ತಿಸ್ಥಾನವಾಗಿತ್ತು. ಬಂಗಾಲವನ್ನೊಡೆದು ದೇಶಗೆಲ್ಲುವ ಕುಟಿಲನೀತಿಯ ರೂವಾರಿ ವೈಸ್‌ರಾಯ್ ಕರ್ಜನ್, ಏಳುಕೋಟಿ ಜನರನ್ನು ನಿಭಾಯಿಸುವುದು ಅಸಾಧ್ಯವೆಂಬ ಅಸ್ಪಷ್ಟ ಕಾರಣವೊಡ್ಡಿ ಹಿಂದೂ – ಮುಸ್ಲಿಂ ಬಾಹುಳ್ಯದ ಎರಡು ಭಾಗಗಳಾಗಿಸುವ ಯೋಜನೆ ರೂಪಿಸಿದ. ಮುಸಲ್ಮಾನರನ್ನು ಓಲೈಸಿ, ಪ್ರತ್ಯೇಕತೆಯ ಭಾವನೆ ಮೂಡಿಸಿ, ಕಾಂಗ್ರೆಸನ್ನು ಅಂಕೆಯಲ್ಲಿಟ್ಟುಕೊಂಡರೆ ಶತಮಾನಗಳ ಕಾಲ ಭಾರತವನ್ನು ಆಳಬಹುದೆಂಬ ಭಂಡಧೈರ್ಯದ ಭ್ರಮೆಯಲ್ಲಿ ಭಾರತೀಯರ ಭಾವನೆಗಳನ್ನು ಪರಿಗಣಿಸದೆ ೧೯೦೫ರ ಅಕ್ಟೋಬರ್ ೧೬ರಂದು ಬಂಗಾಲ ಎರಡು ಹೋಳಾಯಿತು.
ಭ್ರಮೆ ಕಳಚಿ ವಾಸ್ತವದ ಬಿಸಿತಟ್ಟಲು ಹೆಚ್ಚು ಸಮಯ ಬೇಕಾಗಲಿಲ್ಲ. ಸಣ್ಣ ಪ್ರಾಂತದ ವಿಭಜನೆಯ ವಿರುದ್ಧ ಬಂಗಾಳದಲ್ಲಿ ಮೊಳಗಿದ ಹೋರಾಟದ ಕೂಗು ದೇಶವ್ಯಾಪಿ ಆಂದೋಲನದ ರೂಪುಪಡೆಯಿತು. ರಾಷ್ಟ್ರಕವಿ ಬಂಕಿಮರ ‘ಆನಂದ ಮಠ’ ಕಾದಂಬರಿಯ ‘ವಂದೇ ಮಾತರಂ’ ವೀರಘೋಷ ಆಬಾಲವೃದ್ಧರನ್ನು ಏಕಸೂತ್ರದಡಿ ಜೋಡಿಸಿತು. ಮೂರೂವರೆ ಸಾವಿರಕ್ಕೂ ಅಧಿಕ ಸಾರ್ವಜನಿಕ ಸಭೆ, ಜೈಲು, ಶಾಲೆ, ಕಛೇರಿ, ಗುಡಿಗೋಪುರಗಳಲ್ಲಿ ಮೊಳಗಿದ ರಣಪಂಚಾಕ್ಷರೀ ಮಂತ್ರಧ್ವನಿಗೆ ಸೂರ್ಯಮುಳುಗದ ಸಾಮ್ರಾಜ್ಯ ಗಡಗಡನೆ ನಡುಗಿದ್ದು ಜಾಗತಿಕ ದಾಖಲೆ. ಶೋಕದಿನ ಆಚರಿಸಿ, ರಕ್ಷಾಬಂಧನ ಕಟ್ಟಿ ರಣೋದ್ಯತರಾದ ಜನಸಾಮಾನ್ಯರು ವಿದೇಶೀ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶೀ ಬಳಕೆಗೆ ಮುಂದಡಿಯಿಟ್ಟರು. ಸರಕಾರಿ ನೌಕರರು, ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ನಿಷೇಧಿಸಿದ ಬ್ರಿಟಿಷರ ಕ್ರಮ ಬೆಂಕಿಗೆ ತುಪ್ಪ ಸುರಿಯಿತು. ಸರಕಾರಿ ಶಾಲಾ-ಕಾಲೇಜುಗಳಿಂದ ಹೊರಬಂದು ರಾಷ್ಟ್ರೀಯ ಚಿಂತನೆಯ ಶಿಕ್ಷಣಸಂಸ್ಥೆಗಳ ಸ್ಥಾಪನೆಗೆ ಮುನ್ನುಡಿ ಬರೆದ ಪರಿಣಾಮ ಮುಂದೆ ಬಂಗಾಲ ರಾಷ್ಟ್ರೀಯ ವಿದ್ಯಾಲಯ, ಉತ್ಕಲ ಸ್ವರಾಜ್ಯ ಶಿಕ್ಷಾ ಪರಿಷತ್, ಬನಾರಸ್ ವಿಶ್ವವಿದ್ಯಾಲಯ ಸ್ಥಾಪಿತವಾದವು. ಬ್ರಿಟಿಷ್ ವಿದ್ಯಾರ್ಥಿವೇತನವನ್ನು ಧಿಕ್ಕರಿಸಿ ಕ್ರಾಂತಿ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಂದೇ ಮಾತರಂ ಬಿಲ್ಲೆ ಧರಿಸಿ, ವಿದೇಶೀ ಬಟ್ಟೆಗಳನ್ನು ಸುಟ್ಟು ಹೋಳಿ ಆಚರಿಸಿದರು.
ಸುರೇಂದ್ರನಾಥ ಬ್ಯಾನರ್ಜಿ ನೇತೃತ್ವದ ಸಭೆಗಳು, ಅರವಿಂದರ ಸಶಸ್ತ್ರಕ್ರಾಂತಿಯ ಘೋಷಣೆ, ಯುಗಾಂತರ – ವಂದೇ ಮಾತರಂ ಪತ್ರಿಕೆಗಳು, ಖುದಿರಾಮ್ – ಪ್ರಫುಲ್ಲರ ಪ್ರಪ್ರಥಮ ಬಾಂಬ್ ದಾಳಿ, ಅನುಶೀಲನಾ ಸಮಿತಿಯ ಕ್ಷಿಪ್ರಕ್ರಾಂತಿ, ಲಾಲ್-ಬಾಲ್-ಪಾಲರ ಧೀರನಡೆ, ಸಾವರ್ಕರರ ಅಭಿನವ ಭಾರತ, ಚಿದಂಬರಂ ಪಿಳ್ಳೈ ದೇಸೀ ಹಡಗು, ಕಾನ್ಹೇರೆ ಸಾಹಸ, ಸುಬ್ರಹ್ಮಣ್ಯ ಭಾರತಿ ರಾಷ್ಟ್ರೀಯ ಸಾಹಿತ್ಯ, ನಿವೇದಿತಾ – ಮೇಡಂ ಕಾಮಾರಿಂದ ಹೊರಹೊಮ್ಮಿದ ಭಾರತಧ್ವಜ, ಪಂಜಾಬ್ ನ್ಯಾಶನಲ್ ಬ್ಯಾಂಕ್ – ಭಾರತ್ ಇನ್ಶೂರೆನ್ಸ್ ಕಂಪೆನಿ ಆರಂಭ, ಇಂಗ್ಲೆಂಡ್ ನೆಲದಲ್ಲಿ ಭಾರತಭವನದ ಮೂಲಕ ನಡೆದ ಕ್ರಾಂತಿ, ಧಿಂಗ್ರಾ ಧೈರ್ಯವೇ ಮುಂತಾದ ಸಾವಿರ ಸಾವಿರ ಹೊಸ ಯೋಜನೆ, ಯೋಚನೆಗಳಿಗೆ ಪ್ರೇರಣೆಯಾದುದು ಬಂಗಾಲ ವಿಭಜನೆ. ದುರಂತವೆಂದರೆ ಢಾಕಾದ ನವಾಬ್ ಸಲೀಮುಲ್ಲಾನಿಗೆ ಗಾಳಹಾಕಿದ ಬ್ರಿಟಿಷರ ರಾಜಕೀಯ ಬೆಂಬಲದಿಂದ ಮುಸ್ಲಿಂ ಲೀಗ್ ಉದಯವಾಗಿ ಮುಸಲ್ಮಾನರು ಭಾರತದ ಪರವೆಂಬ ನಂಬಿಕೆ ಶಿಥಿಲವಾಯಿತು. ಪ್ರತ್ಯೇಕತಾಭಾವ, ವಂದೇ ಮಾತರಂ ವಿರೋಧ, ದೇಶವಿಭಜನೆಯ ದುರಂತಕ್ಕೆ ನಾಂದಿಹಾಡಿತಲ್ಲದೆ ಹಿಂದುಗಳ ಮೇಲಿನ ದೌರ್ಜನ್ಯ ಆರಂಭವಾಯಿತು. ಎಲ್ಲ ಸವ್ಯಾಪಸವ್ಯಗಳ ನಡುವೆ ಯುದ್ಧದಿಂದಲೇ ಸ್ವಾತಂತ್ರ‍್ಯವೆಂಬ ಸತ್ಯಪಥದತ್ತ ಹೆಜ್ಜೆಹಾಕಿದ ಭಾರತಕ್ಕೆ ಕ್ರಾಂತಿಯಿಂದಲೇ ಸ್ವಾತಂತ್ರ‍್ಯ ಲಭಿಸುವುದಕ್ಕೆ ಸಾಧ್ಯವಾದ ವಂದೇ ಮಾತರಂ ದೇಶದ ಸ್ವಾಭಿಮಾನದ ಹೆಮ್ಮೆ. ಆದರೆ ಆ ಗಾನಸುಧೆ ಹಾಡಲು ಅಡ್ಡಿಯೆದುರಾದಾಗ ಸಿಂಹವೊಂದು ಘರ್ಜಿಸಿದ್ದು ಹಲವರಿಗೆ ತಿಳಿದಿರಲಿಕ್ಕಿಲ್ಲ.

ತಲೆಮಾರು

‘ನಾನೊಬ್ಬ ಹಾಡುಗಾರ. ಹಾಡುವುದು ನನ್ನ ಧರ್ಮ. ಕಾಂಗ್ರೆಸ್ ಅಧಿವೇಶನದಲ್ಲಿ ‘ವಂದೇ ಮಾತರಂ’ ಹಾಡುವುದು ಪಕ್ಷöದ ಪದ್ಧತಿ. ನಿಮ್ಮ ಮತಾಚಾರಗಳು ಮಾತೃಭೂಮಿಯಲ್ಲಿ ದೇವರನ್ನು ಕಾಣುವುದನ್ನು ಒಪ್ಪದಿರೆ ಸುಮ್ಮನಿರಿ. ದೇಶಭಕ್ತಿಯ ಹಾಡು ಹಾಡುವುದಕ್ಕೆ ಅಡ್ಡಿ ಪಡಿಸಿದರೆ ರುದ್ರರೂಪಿ ಗಾಯಕನನ್ನು ನೋಡಬೇಕಾಗುತ್ತದೆ. ನಾಲಗೆ ಇದೆಯೆಂದು ಮಾತನಾಡಿದರೆ ಪರಿಣಾಮ ನೆಟ್ಟಗಿರದು’ ಎಂದು ಘರ್ಜಿಸಿ ಮುಸ್ಲಿಂ ಲೀಗಿನ ಪುಂಡರನ್ನೂ, ಜಾತ್ಯತೀತತೆಯ ಮುಖವಾಡ ಹೊ ಓಲೈಕೆಪಟು ಕಾಂಗ್ರೆಸಿಗರನ್ನೂ ತರಾಟೆಗೆತ್ತಿದ ಅಪ್ರತಿಮ ದೇಶಭಕ್ತ ಪಂಡಿತ ವಿಷ್ಣು ದಿಗಂಬರ ಫಲುಸ್ಕರ್, ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ರಾಗಸಂಯೋಜನೆಗೈದ ಮೇರುವಿದ್ವಾಂಸ. ಮಹಾರಾಷ್ಟ್ರದ ಕೀರ್ತನಕೇಸರಿ ದಿಗಂಬರ ಗೋಪಾಲ ಫಲುಸ್ಕರ್ ದಂಪತಿಗಳಿಗೆ ೧೮೭೨ರ ಆಗಸ್ಟ್ ಹದಿನೆಂಟರಂದು ಜನಿಸಿದ ವಿಷ್ಣು ಫಲುಸ್ಕರ್, ಬಾಲ್ಯದಲ್ಲಿ ನಡೆದ ಅವಘಡವೊಂದರಲ್ಲಿ ದೃಷ್ಟಿ ಕಳೆದುಕೊಂಡರೂ ಸುದೈವವಶಾತ್ ಕೆಲವರ್ಷಗಳ ಬಳಿಕ ಆರೋಗ್ಯವಂತರಾದರು. ಸಂಗೀತದಲ್ಲಿನ ಆಸಕ್ತಿಯನ್ನು ಮುಂದುವರಿ ಸುವ ನಿಟ್ಟಿನಲ್ಲಿ ಹನ್ನೆರಡು ವರ್ಷ ನಿರಂತರ ಅಧ್ಯಯನಗೈದು ದೇಶಾದ್ಯಂತ ಸಂಚರಿಸಿದ ಫಲುಸ್ಕರ್, ಅನೇಕ ಸಂಗೀತಪ್ರೇಮಿಗಳನ್ನೂ, ಕಲಾರಾಧಕರನ್ನೂ ಭೇಟಿ ಮಾಡಿ ವಿದ್ಯಾಸಂಸ್ಥೆ ಸ್ಥಾಪಿಸುವ ತಮ್ಮ ಕನಸನ್ನು ಬಿಚ್ಚಿಟ್ಟರು. ಸಂಗೀತ ಕಚೇರಿ ಕೇವಲ ದೇವಸ್ಥಾನ, ಅರಮನೆಗಳಿಗೆ ಸೀಮಿತವಾಗಿ ಕಾಲದಲ್ಲಿ ಮೊಟ್ಟ ಮೊದಲ ಬಾರಿ ಸಾರ್ವಜನಿಕ ಕಾರ್ಯಕ್ರಮ ನೀಡಿ ದಾಖಲೆ ಬರೆದುದಷ್ಟೇ ಅಲ್ಲದೆ ಹಿಂದುಸ್ಥಾನಿ ಸಂಗೀತದಲ್ಲಿ ಹಲವು ಬದಲಾವಣೆಗಳಿಗೂ ಕಾರಣರಾದರು. ಪೂರ್ಣಪ್ರಮಾಣದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ದೇಸೀ ಚಿಂತನೆಯನ್ನು ಸಾದರಪಡಿಸುವ ಸಂಗೀತಸಂಸ್ಥೆಯ ಸ್ಥಾಪನೆಗೆ ಅಹರ್ನಿಶಿ ಶ್ರಮಿಸಿ, ಲಾಹೋರಿನಲ್ಲಿ ಗಂಧರ್ವ ಮಹಾವಿದ್ಯಾಲಯವನ್ನು ಆರಂಭಿಸಿ ಯಶಸ್ವಿಯಾದರು. ಸಂಗೀತವನ್ನು ವಿದ್ಯಾಲಯದ ಮೂಲಕವೂ ಕಲಿಸಿಕೊಡಬಹುದೆಂಬುದನ್ನು ಮೊಟ್ಟ ಮೊದಲ ಬಾರಿಗೆ ಸಾಧಿಸಿ ತೋರಿಸಿದ ಫಲುಸ್ಕರರು ರಘುಪತಿ ರಾಘವ ರಾಜಾರಾಂನ ಮೂಲರೂಪ ಹಾಡಿ ಅದನ್ನು ಪ್ರಸಿದ್ಧಗೊಳಿಸಿದರು. ರಾಮಚರಿತಮಾನಸದ ಸಂಗೀತಮಯ ಪ್ರವಚನಕ್ಕೆ ಹೆಸರುವಾಸಿಯಾದರಲ್ಲದೆ ದೇಶಭಕ್ತಿ ಪಸರಿಸುವ ಅನೇಕ ಸಾಹಿತ್ಯಕ್ಕೆ ರಾಗ ಸಂಯೋಜನೆಗೈದರು. ಮುಂಬೈಯಲ್ಲೂ ಸಂಸ್ಥೆ ಪ್ರಾರಂಭಿಸಿ ಅನೇಕ ಸಂಗೀತಗುರುಗಳಿಗೆ ಆಶ್ರಯದಾತರಾದ ಫಲುಸ್ಕರ್, ಜನಸಾಮಾನ್ಯರಿಗೆ ಸಂಗೀತದ ಕಂಪನ್ನು ತಲುಪಿಸಿದ ನಾದಾರಾಧಕ. ನಾಸಿಕ್ ಶ್ರೀರಾಮನಾಮ ಆಧಾರಾಶ್ರಮ ಆರಂಭಿಸಿ ಸಾಮಾಜಿಕ, ರಾಷ್ಟ್ರೀಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿ ಸಂಗೀತ ಸಾರಾಮೃತ ಪ್ರವಾಹವೆಂಬ ಮಾಸಿಕ ಪತ್ರಿಕೆಯನ್ನು ಹದಿನಾಲ್ಕು ವರ್ಷ ಸಂಪಾದಿಸಿದರು. ರಾಗಪ್ರವೇಶ, ಬಾಲಪ್ರಕಾಶ, ಸಂಗೀತ ಬಾಲಬೋಧ, ಭಜನಾಮೃತ ಲಹರಿ, ರಾಮನಾಮಾವಲಿ, ಸಂಗೀತ ನಾಮಸ್ಮರಣೆ, ಭಕ್ತಪ್ರೇಮಲಹರಿ, ರಾಮಗುಣಗಾನ, ಸಂಗೀತ ಮತ್ತು ವ್ಯಾಯಾಮ, ಭಾರತೀಯ ಸಂಗೀತ ಲೇಖನ ಪದ್ಧತಿ ಇತ್ಯಾದಿ ಅತ್ಯಮೂಲ್ಯ ಕೃತಿಗಳನ್ನು ರಚಿಸಿದ ಫಲುಸ್ಕರ್ ವಂದೇ ಮಾತರಂ ಗೀತಗಾಯನಕ್ಕೆ ಪ್ರಸಿದ್ಧರು. ಕಂಠದಿಂದ ರಣಮಂತ್ರ ಮೊಳಗುತ್ತಿಂತೆ ಸಭೆಯೇ ಸ್ತಬ್ಧವಾಗುವ ದಿವ್ಯಪ್ರತಿಭೆ ಸಂಪಾದಿಸಿ ಫಲುಸ್ಕರ್, ೧೯೩೧ರ ಆಗಸ್ಟ್ ಇಪ್ಪತ್ತೊಂದರಂದು ಅಸ್ತಂಗತರಾದರು. ಕಲೆಯ ಮೂಲಕ ರಾಷ್ಟ್ರೀಯ ಭಾವನೆಯನ್ನು ಜಾಗೃತಗೊಳಿಸಿ ಭಾರತೀಯರ ಮನಮಸ್ತಿಷ್ಕಗಳಲ್ಲಿ ದೇಶಭಕ್ತಿಯ ಅಲೆಯೆಬ್ಬಿಸಿದ ಗಾನಗಂಧರ್ವ ಫಲುಸ್ಕರರ ಕಲಾಸೇವೆ ನಾಡಿಗೆ ಸ್ಫೂರ್ತಿ. ದೇಶಹಿತಚಿಂತನೆಗೆ ಸವಾಲು ಎದುರಾಗುತ್ತಿರುವ ಈ ಹೊತ್ತಲ್ಲಿ ‘ವಂದೇ ಮಾತರಂ’ ಪುನರಪಿ ಉದಯಿಸಲಿ.