ಮೈಸೂರು: ಬಸವಣ್ಣ ಯಾವುದೇ ಸಮುದಾಯಕ್ಕೆ ಸೇರಿದವರಲ್ಲ. ಅವರೊಂದು ವಿಚಾರ, ಅವರು ಬಯಸಿದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅಭಿಪ್ರಾಯಪಟ್ಟರು.
ಇಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ(ರಿ), ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ, ಮೈಸೂರು ಇವರ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿದ್ದ “ರಜತ ಮಹೋತ್ಸವ – ಬೆಳ್ಳಿಬೆಳಗು” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರಿನ ವಿವಿಧ ವೀರಶೈವ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಬಸವ ಜಯಂತಿ ಆಚರಣೆ ಮಾಡಿದ ಸ್ವಾಮೀಜಿಯ ನಿರ್ಣಯ ಎಲ್ಲರಿಗೂ ಮಾದರಿಯಾಗಿದೆ. ಬಸವಣ್ಣನ ವಿಚಾರ ನಂಬಿದ ಭಕ್ತಾದಿಗಳು ಈಗಲೂ ವಿಚಾರ ಮಾಡಬೇಕು ಎಂದರು.
ಸಮ ಸಮಾಜದ ನಿರ್ಮಾಣ
ಬಸವಣ್ಣ 900 ವರ್ಷಗಳ ಹಿಂದೆ ಮಾಡಿದ ಹೋರಾಟ ಈಗಲೂ ಪ್ರಸ್ತುತ ಇವೆ. ಲಿಂಗ ಭೇದ, ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದ್ದಾರೆ. ಅದರ ಬಗ್ಗೆ ನಾವು ಎಷ್ಟು ಪ್ರತಿಪಾದನೆ ಮಾಡಿದ್ದೇವೆ ಎಂದು ಆಲೋಚಿಸಬೇಕಿದೆ.
ಯಾವುದೇ ಮೂಢನಂಬಿಕೆ, ಲಿಂಗ ಭೇದ ಇಲ್ಲದಿದ್ದರೆ ಸಮಾಜ ಬೇರೆ ಇರುತ್ತಿತ್ತು. ಬಸವಣ್ಣ ನಿರ್ಮಾಣ ಮಾಡಿದ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ನಡೆದರೆ ಸಮಾನತೆಯ ಸಮಾಜ ನಿರ್ಮಾಣ ಆಗುತ್ತದೆ. ಆರ್ಥಿಕ, ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಬೇಕಿದೆ ಎಂದರು.
ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಲರಿಗೂ ಪಾಲು ಸಿಗಬೇಕು
ಆರ್ಥಿಕ ಅಭಿವೃದ್ಧಿ ಯಲ್ಲಿ ಎಲ್ಲರಿಗೂ ಪಾಲು ಸಿಗಬೇಕು. ಬಸವಣ್ಣನ ಕಾಯಕ ಸಮಾಜ ನಿರ್ಮಾಣ ಮಾಡಬೇಕು. ಬಸವಣ್ಣ ಕಾಯಕವೇ ಕೈಲಾಸ ಅಂತ ಹೇಳಿದರು. ಅದರ ಜೊತೆಗೆ ದಾಸೋಹ ಪದ್ಧತಿಯನ್ನು ತಂದರು. ಕನ್ನಡ ಭಾಷೆಗೆ ಬಸವಾದಿ ಶರಣರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಕರ್ನಾಟಕದ ಮೂಲ ಸಾಹಿತ್ಯದ ನಂತರ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ದೊಡ್ಡ ಕೊಡುಗೆ ಕೊಟ್ಟಿವೆ ಎಂದರು.
ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ನಾಗೇಂದ್ರ, ಮತ್ತಿತರರು ಉಪಸ್ಥಿತರಿದ್ದರು.