ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಮರಗಳ ಕಳವು?

Advertisement

ಶಿರಸಿ: ತಾಲೂಕಿನ ಉಂಚಳ್ಳಿ ಅರಣ್ಯ ವ್ಯಾಪ್ತಿಯ ೨ ಬೀಟ್‌ಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಸಾಗವಾನಿ ಮತ್ತು ಅಕೇಶಿಯಾ ಮರಗಳ ಕಳ್ಳಸಾಗಣೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದಲೇ ನಡೆದಿರುವ ಬಗ್ಗೆ ಸಾರ್ವಜನಿಕರು ದಾಖಲೆ ಸಹಿತ ಆರೋಪ ಮಾಡುತ್ತಿದ್ದಾರೆ.
ಎರಡು ಸಾಗವಾನಿ ಮರ ಮತ್ತು ನೂರಾರು ಅಕೇಶಿಯಾ ಮರಗಳನ್ನು ಹೈಬ್ರಿಡ್ ಅಕೇಶಿಯಾ ಹೆಸರಿನಲ್ಲಿ ನಕಲಿ ಪಾಸ್ ಒದಗಿಸಿ ಸಿಬ್ಬಂದಿಗಳೇ ಬೆಂಗಳೂರು, ಕೇರಳಕ್ಕೆ ಸಾಗಿಸಿರುವ ಅಂಶ ಬೆಳಕಿಗೆ ಬಂದಿದೆ. ಅತಿಕ್ರಮಣ ಜಾಗದ ಗಡಿಯಲ್ಲಿರುವ ಮರಗಳನ್ನು ಯಾವುದೇ ಆದೇಶ ಅಥವಾ ಗ್ರಾಮ ಅರಣ್ಯ ಸಮಿತಿಗೆ ಮಾಹಿತಿಯೂ ಇಲ್ಲದೇ ಕಡಿದು ಸಾಗಿಸಲಾಗಿದೆ. ಉತ್ತಮ ತುಂಡುಗಳನ್ನು ಕೇರಳ ಮತ್ತು ಬೆಂಗಳೂರಿಗೆ, ಸಾಧಾರಣ ತುಂಡುಗಳನ್ನು ಸನಿಹದ ಕಟ್ಟಿಗೆ ಮಿಲ್‌ಗಳಿಗೆ ಸಾಗಿಸಿರುವ ಬಗ್ಗೆ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇದಲ್ಲದೇ ನೂರಾರು ಲೋಡ್ ಮಣ್ಣನ್ನು ಕಳ್ಳ ಸಾಗಣೆ ಮಾಡಿ ಅಕ್ರಮ ಸೈಟ್ ನಿರ್ಮಿಸಲಾಗುತ್ತಿದೆ. ಮಾಲ್ಕಿ ಜಮೀನಿನಲ್ಲಿ ಸೈಟ್ ಮಾಡಿ ಬಡಾವಣೆ ನಿರ್ಮಿಸಿ ಮಾರಾಟ ಮಾಡುವಾಗ ಗಡಿಭಾಗದ ಅರಣ್ಯ ಭೂಮಿಯನ್ನು ಅಕ್ರಮವಾಗಿ ಸೈಟ್ ಎಂದು ಮಾರಲಾಗುತ್ತಿದೆ.
ಎರಡು ವರ್ಷಗಳ ಹಿಂದೆ ಮಂಜೂರಿ ಆಗಿದೆ ಎಂದು ೨ ಎಕರೆ ಭೂಮಿಯಲ್ಲಿ ಮಣ್ಣು ತೆಗೆದು ಸೈಟ್ ಮಾಡಿ ತಮ್ಮದೇ ಸಮುದಾಯದವರಿಗೆ ಮಾರಾಟ ಮಾಡಲಾಗಿದೆ. ಇಷ್ಟಾದರೂ ಇಲಾಖೆ ಅಧಿಕಾರಿಗಳು ದಿವ್ಯ ಮೌನ ತಾಳಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುಂತಾಗಿದೆ.