ಟಗರು ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಧ್ರುವ ಸರ್ಜಾ

ದೃವಸರ್ಜಾ
Advertisement

ಕುಷ್ಟಗಿ: ನನಗೆ ಉತ್ತಮವಾದ ಒಂದು ಟಗರನ್ನು ನೀಡುವಂತೆ ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರಲ್ಲಿ ಮನವಿ ಮಾಡಿದ್ದೆ. ಅಂತೆಯೇ ಅವರು ತಮ್ಮ ಹುಟ್ಟುಹಬ್ಬದ ದಿನದಂದೇ ನನಗೆ ಒಂದು ಟಗರು ನೀಡಿದ್ದಾರೆ. ಅವರ ಜೊತೆಗೆ ನಾನು ಸದಾಕಾಲ ಇರುತ್ತೇನೆ. ಅವರ ಸಂಕಲ್ಪ ಈಡೇರಲಿ ಎಂದು ಯುವ ನಟ ಧ್ರುವ ಸರ್ಜಾ ಹೇಳಿದರು.
ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಸಮಾರಂಭದಲ್ಲಿ‌ ಭಾಗವಹಿಸಿ ಅವರು ಮಾತನಾಡಿದರು. ಹನುಮದ್‌ ವ್ರತದಂದು ದೊಡ್ಡನಗೌಡ ಅವರ ಹುಟ್ಟುಹಬ್ಬ ಇದ್ದಿದ್ದು ಸಂತಸ ತಂದಿದೆ. ಅಂದುಕೊಂಡಿರುವ ಎಲ್ಲಾ ಕೆಲಸಗಳು ಸಹ ಈಡೇರಲಿ. ನಾನು ರಾಜಕೀಯವಾಗಿ ಏನು ಮಾತನಾಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ನಾನು ಇಬ್ಬರನ್ನು ನೆನಪು ಮಾಡಿಕೊಳ್ಳುತ್ತೇನೆ. ಒಬ್ಬರು ನಮ್ಮ ಅಣ್ಣ ಚಿರಂಜೀವಿ ಸರ್ಜಾ, ಮತ್ತೊಬ್ಬ ನಾಡಿನ ಕಣ್ಮಣಿ ನಟ ಪುನೀತ್ ರಾಜಕುಮಾರ್. ಇಬ್ಬರು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ. ಪೊಲೀಸರಲ್ಲಿ ನಾನು ಕೈಮುಗಿದು ಕೇಳುತ್ತೇನೆ, ನನ್ನ ಅಭಿಮಾನಿಗಳಿಗೆ ಯಾವುದೇ ರೀತಿ ತೊಂದರೆ ಕೊಡಬಾರದು ಎಂದು ಮನವಿ ಮಾಡಿದರು.
ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು:
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವರ್ಣ ರಂಜಿತ ವೇದಿಕೆಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ವೇದಿಕೆ ಮೇಲೆ ಮುಗಿಬಿದ್ದಿದ್ದು ಕಂಡು ಬಂತು. ಅಷ್ಟೇ ಅಲ್ಲದೇ, ನಟ ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದಂತೆ ಅಭಿಮಾನಿಯೋರ್ವ ಅವರ ಕಾಲನ್ನು ಹಿಡಿದುಕೊಂಡು ನಾನು ನಿಮ್ಮ ಅಭಿಮಾನಿ ಪಟ್ಟು ಹಿಡಿದನು. ಪೊಲೀಸರು ಬ್ಯಾರಿಕೇಡ್ನಂತೆ ನಿಂತರೂ ಸಹ ಅಭಿಮಾನಿಗಳು ಪೊಲೀಸರನ್ನು ಭೇದಿಸಿ ನೆಚ್ಚಿನ ನಟ ಧ್ರುವ ಸರ್ಜಾ ಅವರನ್ನು ಭೇಟಿ ಮಾಡಿ, ಸೆಲ್ಫಿಗಾಗಿ ಹರಸಹಾಸ ಪಟ್ಟರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಕನಕಗಿರಿ ಶಾಸಕ ಬಸವರಾಜ ದಡೇಸುಗೂರು, ಗಂಗಾವತಿ ಶಾಸಕ‌ ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಕೆ. ಶರಣಪ್ಪ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಪತ್ತಾರ, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಹಾಲುಮತ ಸಮುದಾಯದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಪ್ರಕಾಶ‌ ಬೆದವಟ್ಟಿ, ನಾಗರಾಜ ಮೇಲಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.