ಬಾಗಲಕೋಟೆ: ಚಿಲುಮೆ ಸಂಸ್ಥೆಯಿಂದ ಮತದಾರರ ಪಟ್ಟಿಯಲ್ಲಿನ ಹೆಸರುಗಳು ನಾಪತ್ತೆಯಾಗಿರುವ ಆರೋಪದ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯಲ್ಲೂ 64594 ಹೆಸರುಗಳು ಮತದಾರರ ಪಟ್ಟಿಯಿಂದ ಕಾಣೆಯಾಗಿರುವ ಗಂಭೀರ ಆರೋಪವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. 2022ರ ಜನವರಿ ತಿಂಗಳಿನಿಂದ ನವೆಂಬರ್ ತಿಂಗಳ 10 ತಿಂಗಳ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಆರೋಪಿಸಿದ್ದಾರೆ.
ನಿರ್ದಿಷ್ಟ ಸಮುದಾಯ, ವ್ಯಕ್ತಿಗಳ ಹೆಸರುಗಳನ್ನೇ ಬಿಟ್ಟಿರುವ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಮನೆ, ಮನೆಗೆ ತೆರಳಿ ಯಾರೆಲ್ಲ ಹೆಸರುಗಳು ಬಿಟ್ಟು ಹೋಗಿವೆ ಎಂಬುದರ ಕ್ಷೇತ್ರ ಕಾರ್ಯಕ್ಕೂ ಮುಂದಾಗಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 64954 ಹೆಸರುಗಳು ನಾಪತ್ತೆ ಆಗಿವೆ ಎಂದು ದೂರಿದರು. ಮಾಜಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಬೀಳಗಿ ಕ್ಷೇತ್ರದ ಕಂದಗಲ್, ಸೊನ್ನ ಗ್ರಾಮಗಳಲ್ಲಿ ದಲಿತರು, ಅಲ್ಪಸಂಖ್ಯಾತ ಮತದಾರರ ಹೆಸರುಗಳು ಕಾಣಿಸಿಕೊಂಡಿಲ್ಲ. 2004ರ ಚುನಾವಣೆಯಲ್ಲೂ ಇಂಥದೆ ಅನ್ಯಾಯ ಆಗಿತ್ತು ನನ್ನ ದೂರು ಆಧರಿಸಿ 35 ಸಾವಿರ ನಕಲಿ ಮತದಾರರನ್ನು ಕೈ ಬಿಡಲಾಯಿತು. ತನಗೆ ಬೇಡದವರ ಹೆಸರುಗಳನ್ನು ಕೈಬಿಟ್ಟು ಬಿಜೆಪಿ ಪರ ಇರುವ ಮತಗಳನ್ನಷ್ಟೇ ಉಳಿಸುವ ಹುನ್ನಾರ ನಡೆದಿದೆ ಎಂದರು.
ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ಬಾಗಲಕೋಟೆಯಲ್ಲೂ ಅವ್ಯಾಹತವಾಗಿ ಈ ರೀತಿ ನಡೆದಿದೆ. ದೇಗುಲಗಳಲ್ಲಿ ಮತದಾನ ಕೇಂದ್ರ ಇರಬಾರದು ಎಂದು ಇದೆ ಆದರೆ ನಗರದ ಮಾಹೇಶ್ವರಿ ಮಂಗಲ ಕಾರ್ಯಾಲಯ ದೇಗುಲಕ್ಕೆ ಹೊಂದಿಕೊಂಡು ಇದ್ದು, ನಿಯಮ ಬಾಹಿರವಾಗಿ ಅಲ್ಲಿ ಮತದಾನ ಕೇಂದ್ರ ತೆರೆಯಲಾಗಿತ್ತು ಈ ಬಗ್ಗೆ ಪಕ್ಷದ ಆಕ್ಷೇಪವಿದೆ ಎಂದರು.