ವಿಜಯಪುರ: ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರಾಜ್ಯದಲ್ಲಿ ಅಭಿವೃದ್ಧಿಯ ರಾಜಯೋಗ ಆರಂಭವಾಗಲಿದೆ ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು.
ತಿಕೋಟಾ ತಾಲೂಕಿನ ಕನಮಡಿಯಲ್ಲಿ ಬಳಿಯ ಧರಿದೇವರ ದೇವಸ್ಥಾನದ ಹತ್ತಿರ ೧.೨೫ ಕೋಟಿ ರೂ. ವೆಚ್ಚದ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ವಿಜಯಪುರ ಜಿಲ್ಲೆಯ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಗಡಿ ಭಾಗದ ಜನ ಗುಳೆ ಹೋಗುವುದನ್ನು ಬಿಟ್ಟು ತಮ್ಮ ತಮ್ಮ ಹೊಲಗಳಲ್ಲಿ ಕೃಷಿ ಮಾಡುತ್ತ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಯಾವ ಭಾಗದಿಂದ ಜನ ಗುಳೆ ಹೋಗುತ್ತಿದ್ದರೋ, ಅದೇ ಭಾಗಕ್ಕೆ ಬೇರೆ ರಾಜ್ಯಗಳಿಂದ ಜನ ದುಡಿಯಲು ಬರುತ್ತಿದ್ದರು. ಇದು ಈ ಭಾಗದಲ್ಲಿ ರೈತರಿಗೆ ನೀರಾವರಿಯಿಂದ ಸಿಗುತ್ತಿರುವ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ ಎಂದರು.