ಮಳೆರಾಯನ ಅಟ್ಟಹಾಸ ಕಡಿಮೆ ಯಾದರೂ ಹಾನಿಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲೂ ಅತಿ ಹೆಚ್ಚು ಹಾನಿಗಳು ಸಂಭವಿಸಿವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಕಳಸ ಮತ್ತಿತರ ಕಡೆ ಭೂಕುಸಿತ ಉಂಟಾಗಿದೆ. ಹಲವು ಕಡೆಗಳಲ್ಲಿ ರಸ್ತೆ, ಸೇತುವೆ ಬಿರುಕು ಬಿಟ್ಟು ಸಂಚಾರ ಸ್ಥಗಿತೊಂಡಿದೆ. ತುಂಗೆ ಮತ್ತು ಭದ್ರೆ ಎರಡೂ ನದಿಗಳು ಭರ್ತಿಯಾಗಿವೆ. ಜಲಾಶಯಗಳ ಹೆಚ್ಚುವರಿ ನೀರನ್ನು ನಿರಂತರವಾಗಿ ನದಿಗೆ ಬಿಡಲಾಗುತ್ತಿದೆ. ನದಿ ಇಕ್ಕೆಲಗಳಲ್ಲಿ ಬರುವ ಅನೇಕ ಹಳ್ಳಿಗಳು ಜಲಾವೃತ ವಾಗಿವೆ. ನದಿ ದಂಡೆಗಳ ಹತ್ತಿರ ಇರುವ ತಗ್ಗು ಪ್ರದೇಶಗಳಲ್ಲಿನ ಕುಟುಂಬ ಗಳನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಆದರೆ ಇಂತಹ ಕುಟುಂಬಗಳು ಮತ್ತೆ ಮುಂದಿನ ಮಳೆಗಾಲದಲ್ಲಿ ಇಂತಹುದೇ ಸಂಕಷ್ಟದಿಂದ ಪಾರಾಗ ಬೇಕಾದರೆ ಅವರಿಗೆ ಬೇರೆಡೆಗೆ ಸೂರು ಕಲ್ಪಿಸಿ ಸ್ಥಳಾಂತರ ಮಾಡಬೇಕು. ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಹರಿಹರ ಪಟ್ಟಣದಲ್ಲಿ ಹಾಗೂ ಶಿವಮೊಗ್ಗ ನಗರದಲ್ಲಿ ನದಿ ತೀರದ ಬಳಿ ವಾಸಿಸುತ್ತಿರುವ ಇಂತಹ ನೂರಾರು ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಡಬೇಕಿದೆ. ಇನ್ನೊಂದು ಕಡೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ. ಮಧ್ಯ ಕರ್ನಾಟಕದಲ್ಲಿ ಬೆಳೆದಿ ಮೆಕ್ಕೆಜೋಳ ಅಪಾರ ಪ್ರಮಾಣದ ಮಳೆಯಿಂದಾಗಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಜೋಳ, ಹತ್ತಿ ಮತ್ತಿತರ ಬೆಳೆಗಳು ಶೀತಬಾಧೆಗೆ ಒಳಗಾಗಿವೆ. ಅಡಿಕೆ ಬೆಳೆಗೆ ಕೊಳೆರೋಗ ಆವರಿಸಿದೆ. ಔಷಧ ಸಿಂಪಡಿ ಸಲು ಮಳೆ ಬಿಡುವು ನೀಡುತ್ತಿಲ್ಲ. ಹೀಗಾಗಿ ಈ ಬಾರಿ ಅಡಿಕೆ ಇಳುವರಿಯ ಮೇಲೂ ಹೆಚ್ಚಿನ ದುಷ್ಪರಿಣಾಮ ಬೀರಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಹಣ್ಣುಗಳು ಉದುರುತ್ತಿರುವುದ ರಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ. ಮಧ್ಯ ಕರ್ನಾಟಕದ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿ ಮೆಕ್ಕೆಜೋಳದ ಬೆಳೆಯನ್ನು ಈಗಾಗಲೇ ನಾಶಪಡಿಸಿ, ಪರ್ಯಾಯ ಬೆಳೆ ಬಿತ್ತನೆಗೆ ಸಿತೆ ನಡೆಸಿದ್ದರೆ. ಅತಿವೃಷ್ಟಿ ಹಾನಿಗೆ ಪರಿಹಾರ ನೀಡುವಲ್ಲಿ ಓಬಿರಾಯನ ಕಾಲದ ನಿಯಮಾವಳಿಗಳನ್ನು ಬಳಸುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಅನುಭವಿಸುವ ನೈಜ ನಷ್ಟದ ಲೆಕ್ಕಾಚಾರವನ್ನೇ ಮಾಡುವುದಿಲ್ಲ. ಇನ್ನು ನಷ್ಟದ ಸಮೀಕ್ಷೆ ಮಾಡುವ ಅಧಿಕಾರಿಗಳು ಕಚೇರಿಗಳಲ್ಲೇ ಕುಳಿತು ಅಂದಾಜು ಮಾಡುವುದರಿಂದ ಸರ್ಕಾರ ನೀಡುವ ಪರಿಹಾರದ ಹಣ ಸಿಕ್ಕವರಿಗೆ ಸೀರುಂಡೆಯಂತಾಗುತ್ತದೆ. ಬೆಳೆನಷ್ಟದ ನೈಜ ಸಮೀಕ್ಷೆ ನಡೆಸಬೇಕು, ರೈತರು ಹೂಡಿದ ಬಂಡವಾಳವಾದರೂ ಅವರ ಕೈ ಸೇರುವ ರೀತಿಯಲ್ಲಿ ಪರಿಹಾರದ ಹಣವನ್ನು ನಿಗದಿ ಮಾಡಬೇಕು. ಇದಕ್ಕಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದಲ್ಲಿ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಬಹುದಾಗಿದೆ. ಪ್ರತಿಯೊಬ್ಬ ಪಿಡಿಓ ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರ ಎಕರೆವಾರು ಬೆಳೆ ನಷ್ಟದ ನೈಜ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಕೂಡ ವಿಳಂಬ ಮಾಡದೆ ರೈತರಿಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡುವ ಮೂಲಕ ರೈತರ ನೆರವಿಗೆ ತುರ್ತಾಗಿ ಧಾವಿಸಬೇಕಿದೆ.