ದಾವಣಗೆರೆ: ಪರಿಶಿಷ್ಟ ಜಾತಿ-ಪಂಗಡಗಳನ್ನು ಮತಬ್ಯಾಂಕ್‌ಗೆ ಮಾತ್ರ ಉಪಯೋಗಿಸಿಕೊಂಡಿದ್ದ ಕಾಂಗ್ರೆಸ್, ತಾನು ಅಧಿಕಾರದಲ್ಲಿದ್ದಾಗ ಪರಿಶಿಷ್ಟರ ಏಳ್ಗೆ ಮಾಡಲು ಮುಂದಾಗದೆ, ನಮ್ಮ ಸರ್ಕಾರ ಈಗ ಪರಿಶಿಷ್ಟರ ಮೀಸಲಾತಿ ಹೆಚ್ಚಿಸುವ ಐತಿಹಾಸಿಕ ನಿರ್ಣಯಕ್ಕೂ ಕೂಡ ಸಹಿಸದೆ ಅಪಸ್ವರ ಎತ್ತುತ್ತಿದೆ. ನಾವು ಹೃದಯ ಶ್ರೀಮಂತಿಕೆ ಮತ್ತು ಕಾಳಜಿ ಇದ್ದಿದ್ದರಿಂದ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿ ಅವರಿಗೆ ಸಮ್ಮಾನ ಸಿಗುವಂತೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಗಳೂರಿನಲ್ಲಿ ಬುಧವಾರ ಬಿಜೆಪಿ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.೫ರಿಂದ ೭ಕ್ಕೆ ಹೆಚ್ಚಿಸಿದ್ದೇವೆ. ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.೧೨ರಿಂದ ೧೭ಕ್ಕೆ ಹೆಚ್ಚಿಸುವ ಮೂಲಕ ಎಲ್ಲರಿಗ ಸರಿ ಸಮಾನವಾಗಿ ಮಾನ, ಸಮ್ಮಾನದಿಂದ ಪರಿಶಿಷ್ಟರು ಬಾಳಬೇಕೆಂಬ ಕೆಲಸ ಮಾಡಿದ್ದೇವೆ. ಇದನ್ನು ಕಾಂಗ್ರೆಸ್ಸಿಗೆ ಸಹಿಸಲಾಗುತ್ತಿಲ್ಲ ಎಂದು ಟೀಕಿಸಿದರು.
ಪರಿಶಿಷ್ಟರ ಅಭ್ಯುದಕ್ಕೆ ಬಿಜೆಪಿ ಚಿಂತಿಸುತ್ತದೆ ಎಂಬುದನ್ನು ಈ ಮೂಲಕ ನಾವು ಸಾಬೀತು ಮಾಡಿದ್ದೇವೆ. ನಮಗೆ ಒಳ್ಳೆಯಚಿಂತನೆ ಇದ್ದರೇ ಇಂತಹ ಸಾಧ್ಯತೆ ಆಗುತ್ತವೆ. ಎಲ್ಲಿವರೆಗೆ ಪರಿಶಿಷ್ಟರಿಗೆ ಶಿಕ್ಷಣ ಸಿಗುವುದಿಲ್ಲವೋ, ಎಲ್ಲಿವರೆಗೆ ಈ ವರ್ಗಗಳ ಜನರು ವಿದ್ಯಾವಂತರಾಗುವುದಿಲ್ಲವೋ ಅಲ್ಲಿವರೆಗೆ ತಮ್ಮ ಮತ ಬ್ಯಾಂಕ್ ಆಗಿ, ರಕ್ಷಣೆಯಾಗಿರುತ್ತಾರೆಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿತ್ತು. ಪರಿಶಿಷ್ಟರ ರಕ್ಷಣೆ ಕಾಂಗ್ರೆಸ್ಸಿನಿಂದ ಮಾತ್ರ ಎಂಬ ಮನೋಭಾವ ಮೂಡಿಸಿದ್ದರು. ಪರಿಶಿಷ್ಟರು ಈಗ ಸಂಪೂರ್ಣ ಜಾಗೃತರಾಗಿದ್ದಾರೆ. ಅವರ ಅಭಿವೃದ್ಧಿ ಯಾವ ಪಕ್ಷದಿಂದ ಸಾಧ್ಯ ಎಂಬುದನ್ನು ಅವರು ಅರಿತಿದ್ದಾರೆ ಎಂದರು.
ಸಿದ್ದರಾಮಯ್ಯ ಅಹಿಂದ ಬಗ್ಗೆ ಹೆಚ್ಚು ಮಾತನಾಡುತ್ತಾರೆಂದು ಒಮ್ಮೆ ಕಾಂಗ್ರೆಸ್ಸಿಗೆ ಅಧಿಕಾರ ಕೊಟ್ಟ ನಾಡಿನ ಜನತೆಗೆ ಭ್ರಮನಿರಸನವಾಗಿದೆ. ಸಿದ್ದರಾಮಯ್ಯ ೫ ವರ್ಷ ಕಾಲ ಅಧಿಕಾರದಲ್ಲಿದ್ದಾಗ ಅವರದ್ದೇ ಸಮಾಜವಾಗಿರುವ ಕುರುಬ ಸಮುದಾಯಕ್ಕೆ ನೆರವು, ಅನುಷ್ಟಾನ ಸಾಧ್ಯವಿಲ್ಲವೆಂದಿದ್ದರು. ಸಿದ್ದರಾಮಯ್ಯ ಮಾತನ್ನು ನಾನು ಸವಾಲಾಗಿ ಸ್ವೀಕರಿಸಿದ್ದು, ಅದನ್ನು ಅನುಷ್ಟಾನಕ್ಕೆ ತಂದೇ ತರುತ್ತೇನೆ. ಬಡಿಗೇರ, ಕಮ್ಮಾರ, ಕುಂಬಾರ, ಮೇದಾರ ಸೇರಿದಂತೆ ೨೩ ಹಿಂದುಳಿದ ವರ್ಗಗಳ ಜನರಿಗೆ ಆರ್ಥಿಕ ನೆರವು ನೀಡುವ ಯೋಜನೆ ಶೀಘ್ರವೇ ಜಾರಿಗೊಳ್ಳಲಿದೆ. ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶ, ಸಮಗೌರವ, ಸಮ ಶಿಕ್ಷಣ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಎಲ್ಲರ ಪಾಲನ್ನೂ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
೫ ದಶಕದಿಂದ ಜನಗಣತಿಗೆ ಅನುಗುಣವಾಗಿ ಮೀಸಲಾತಿಗೆ ಹೋರಾಟ ನಡೆದರೂ ಯಾರಿಗೂ ಕೇಳಿರಲಿಲ್ಲ. ಯಾವ ಸರ್ಕಾರವೂ ಸ್ಪಂದಿಸಿರಲಿಲ್ಲ. ಆಯಾ ಸರ್ಕಾರಗಳು ಸಮಿತಿ ರಚಿಸಿ, ಕೈಬಿಟ್ಟಿದ್ದವು. ನಮ್ಮ ಸರ್ಕಾರವು ಕಾನೂನು ಚೌಕಟ್ಟು ಕೊಟ್ಟು, ಎಸ್ಟಿಗೆ ಶೇ.೩ರಿಂದ ೭ಕ್ಕೆ, ಎಸ್ಸಿಗೆ ಶೇ.೧೫ರಿಂದ ೧೭ಕ್ಕೆ ಮೀಸಲಾತಿ ಹೆಚ್ಚಿಸಿದೆ. ಇದನ್ನು ಮಾಡಿದ್ದು ಬಿಜೆಪಿ ಸರ್ಕಾರ ಎಂದು ಅವರು ಹೇಳಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‌ನವರು ಭಾರತ ಜೋಡಿಸಲು ಬರುತ್ತಿದ್ದಾರೆ. ಕರ್ನಾಟಕಕ್ಕೆ ಯಾಕೆ ಬಂದ್ರು ಗೊತ್ತಿಲ್ಲ. ಭಾರತ ಇಬ್ಭಾಗವಾಗಲು ರಾಹುಲ್ ಗಾಂಧಿಯ ತಾತ ಉತ್ತರ ಹೇಳಬೇಕು. ಆದರೆ, ಅವರಿಲ್ಲ ಎಂದು ವ್ಯಂಗ್ಯವಾಡಿದ ಸಚಿವ ಕಾರಜೋಳ ದೀನದಲಿತರ, ರೈತರ ಹೆಸರಲ್ಲಿ ರಾಜಕಾರಣ ಮಾಡಿದವರು ಅವರ ಕಲ್ಯಾಣ ಮಾಡಲಿಲ್ಲ. ಡಿ.ಕೆ. ಶಿವಕುಮಾರ್, ಪರಮೇಶ್ವರ್ ಸಹಿತ ಮೂರ್ನಾಲ್ಕು ಮಂದಿ ಸಿಎಂ ಆಗಲು ಹಾತೊರೆಯುತ್ತಿದ್ದಾರೆ. ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೀನದಲಿತರು ಇಂದು ಕಾಂಗ್ರೆಸ್‌ನ ಓಟ್ ಬ್ಯಾಂಕ್ ಆಗಿ ಉಳಿದಿಲ್ಲ. ಮೀಸಲಾತಿ ಹೆಚ್ಚಿಸಿರುವುದು ಕಾಂಗ್ರೆಸ್‌ಗೆ ಹೊಟ್ಟೆ ಉರಿಯಾಗಿದೆ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಬಿ.ಎ.ಬಸವರಾಜ ಭೈರತಿ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ವಿ.ರಾಮಚಂದ್ರ, ಡಾ.ಎ.ಎಚ್.ಶಿವಯೋಗಿಸ್ವಾಮಿ ಇತರರು ಇದ್ದರು.