ಧಾರವಾಡ: ಮನೆ ನಿರ್ಮಾಣ ಮಾಡಿಕೊಡಲು ಮುಂಗಡ ಹಣ ಪಡೆದು ಮನೆ ನಿರ್ಮಿಸದೇ ಸೇವಾ ನ್ಯೂನತೆ ಎಸಗಿದ ವೀರಭದ್ರೇಶ್ವರ ಇನ್ಫ್ರಾಸ್ಟ್ರಕ್ಚರ್ ಮತ್ತು ಹೌಸಿಂಗ್ ಪ್ರೈ ಲಿಮಿಟೆಡ್ನ ಆಡಳಿತಾತ್ಮಕ ನಿರ್ದೇಶಕ ನಾಗನಗೌಡ ಶಿವನಗೌಡ ನೀರಲಗಿ ಅವರಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಗ್ರಾಮದ ಪರಮೇಶ್ವರ ಭಟ್ ಧಾರವಾಡದ ಶ್ರೀ ವೀರಭದ್ರೇಶ್ವರ ಇನ್ಪ್ರಾಸ್ಟ್ರಕ್ಚರ್ ಮತ್ತು ಹೌಸಿಂಗ್ ಪ್ರೈ.ಲಿ. ಇದರ ಆಡಳಿತಾತ್ಮಕ ನಿರ್ದೇಶಕರಾದ ನಾಗನಗೌಡ ಶಿವನಗೌಡ ನೀರಲಗಿಯವರ ಜೊತೆ ಪೂರ್ಣಿಮಾ ಲೇಔಟ್ನಲ್ಲಿ ೧೨೦೦ ಚ.ಅ. ವಿಸ್ತೀರ್ಣದ ಜಾಗೆಯಲ್ಲಿ ಮನೆ ನಿರ್ಮಾಣ ಮಾಡಿಕೊಡಲು ರೂ. ೧೬,೮೬,೧೬೭ ಗಳಿಗೆ ಒಪ್ಪಂದ ಮಾಡಿಕೊಂಡಿದ್ದರು. ಇದರ ಪೈಕಿ ರೂ. ೧೩,೯೫,೦೯೭ ಮುಂಗಡವಾಗಿ ನೀಡಿದ್ದರು. ಮುಂಗಡ ಹಣಕೊಟ್ಟು ಒಪ್ಪಂದ ಆಗಿದ್ದರೂ ಬಿಲ್ಡರ್ ತನಗೆ ಮನೆ ನಿರ್ಮಾಣ ಮಾಡಿಕೊಡದೇ ಸೇವಾ ನ್ಯೂನತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಬಿಲ್ಡರ್ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಮನೆ ಕಟ್ಟಿಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಎನ್.ಎಸ್ ನೀರಲಗಿ ದೂರುದಾರರಿಂದ ಪಡೆದ ರೂ. ೧೩,೯೫,೦೯೭ ಗಳನ್ನು ೨೦೧೫ ರಿಂದ ವಾರ್ಷಿಕ ಶೇ. ೯ರಷ್ಟು ಬಡ್ಡಿ ಲೆಕ್ಕ ಹಾಕಿ ನೀಡಬೇಕು. ಅಲ್ಲದೇ ಮಾನಸಿಕ ತೊಂದರೆಗೆ ರೂ. ೧,೦೦,೦೦೦ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ. ೧೦,೦೦೦ ಕೊಡುವಂತೆ ಆಯೋಗ ತೀರ್ಪು ನೀಡಿದೆ.