ಮುಸ್ಲಿಂ ಸಿಎಂ, ದಲಿತ-ಮಹಿಳೆ ಡಿಸಿಎಂ

ಪಂಚರತ್ನ
Advertisement

ಕೋಲಾರ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನೀಡುವ ಮುಕ್ತ ಅವಕಾಶಗಳೂ ನಮ್ಮ ಪಕ್ಷದಲ್ಲಿ ಇವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಕ್ಯಾಲನೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವೇ ಮುಖ್ಯಮಂತ್ರಿ ಆಗಬಹುದೆಂದು ಸಿ.ಎಂ.ಇಬ್ರಾಹಿಂ ಕೂಡ ಹೇಳಿದ್ದಾರೆ. ಈ ರೀತಿ ಚರ್ಚೆ ಮಾಡಲು ಅವಕಾಶ ಇರುವುದು ನಮ್ಮ ಪಕ್ಷದಲ್ಲಿ ಮಾತ್ರ’ ಎಂದರು. ‘ಮುಸ್ಲಿಮರೂ ನಮ್ಮವರೇ. ಅವರೂ ಕರ್ನಾಟಕದ ಪ್ರಜೆಗಳು, ಕನ್ನಡಿಗರು. ಹೀಗಾಗಿ, ಆ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಬಾರದೆಂದೇನೂ ಇಲ್ಲ. ಒಬ್ಬ ವ್ಯಕ್ತಿಗೆ ಅವಕಾಶ ನೀಡುವ ಪ್ರಶ್ನೆ ಇದಲ್ಲ. ನನಗೆ ಆ ಸಮುದಾಯಗಳಲ್ಲಿನ ಸಮಸ್ಯೆಗೆ ಪರಿಹಾರ ಬೇಕು’ ಎಂದು ತಿಳಿಸಿದರು. ‘ದಲಿತರು ಹಾಗೂ ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ಧನಿದ್ದೇನೆ. ಇದು ಸ್ವಯಂಪ್ರೇರಣೆಯಿಂದ ಮಾಡಿದ ಘೋಷಣೆ ಅಲ್ಲ. ದಲಿತ ಸಮುದಾಯದ ಯುವಕನೊಬ್ಬ ಆತ ಎದುರಿಸಿರುವ ಸಮಸ್ಯೆ ಹೇಳಿಕೊಂಡ. ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ಅಸಡ್ಡೆಯಿಂದ ನೋಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ. ದಲಿತರ ಮತ ಪಡೆಯಲು ಈ ಘೋಷಣೆ ಮಾಡಿಲ್ಲ. ಹಾಗೆಯೇ ಮಹಿಳೆಯರ ಕಷ್ಟಗಳನ್ನು ಯಾವುದೇ ಸರ್ಕಾರ ಆಲಿಸುತ್ತಿಲ್ಲ. ಮಹಿಳೆಯರ ರಕ್ಷಣೆಗಾಗಿ ಉಪಮುಖ್ಯಮಂತ್ರಿ ಅವಶ್ಯವೆಂದಾದರೆ ಅದಕ್ಕೂ ಸಿದ್ಧ’ ಎಂದು ನುಡಿದರು.