ಬಳ್ಳಾರಿ: ನಗರದ ಹೊರ ವಲಯದ ಜಿ ಸ್ಕ್ವೇರ್ ಮೈದಾನದಲ್ಲಿ ಹಮ್ಮಿಕೊಂಡಿರುವ ಪರಿಶಿಷ್ಟ ಪಂಗಡಗಳ ನವ ಶಕ್ತಿ ಸಮಾವೇಶಕ್ಕೆ ಜನ ಸಾಗರ ಹರಿದುಬರುತ್ತಿದೆ.
ರಾಜ್ಯದ ಮೂಲೆ ಮೂಲೆಯಿಂದ ಬಸ್, ಕಾರ್, ಬೈಕ್ ಮೂಲಕ ಜನರು ಬಳ್ಳಾರಿಯ ಕಡೆ ಸಾಗುತ್ತಿದ್ದರು. ಬೆಳಗ್ಗೆ 10.30ರ ವೇಳೆಗೆ ವೇದಿಕೆ ಮುಂಭಾಗದ ಬಹುತೇಕ ಕುರ್ಚಿಗಳು ಭರ್ತಿ ಆಗಿದ್ದವು. ರಾಜ್ಯದ ವಿವಿಧ ಮೂಲೆಯಿಂದ ಬಂದ ಕಲಾ ತಂಡಗಳು ಸಮಾವೇಶಕ್ಕೆ ಬಂದ ಜನರನ್ನು ವಿಶೇಷವಾಗಿ ಸ್ವಾಗತಿಸಿದರು. 25ಕ್ಕಿಂತಲೂ ಹೆಚ್ಚು ಬಗೆಯ ಕಲಾ ತಂಡಗಳು ಸಮಾವೇಶದ ಮುಖ್ಯ ದ್ವಾರದಲ್ಲಿ ಬೀಡು ಬಿಟ್ಟಿದ್ದವು. ವಿಶೇಷವಾಗಿ ಅರಣ್ಯ ವಾಸಿ ಬುಡಕಟ್ಟು ಜನಾಂಗದ ವೇಷಧಾರಿಗಳು ವಿಶೇಷವಾಗಿ ಸೊಪ್ಪಿನ ಮೇಲುಡುಗೆ ಉಟ್ಟು ಗಮನ ಸೆಳೆದರು. ಸಮಾವೇಶದ ವೇದಿಕೆ ಬೆಳಗ್ಗೆ 9 ಗಂಟೆಯಿಂದ ವಿವಿಧ ಚಟುವಟಿಕೆಗೆ ವೇದಿಕೆ ಆಯಿತು. ವಿವಿಧ ಗಾಯಕರು ವಾಲ್ಮೀಕಿ, ಅಂಬೇಡ್ಕರ್, ಭಾರತ ಮಾತೆ ಹೊಗಳುವ ಹಾಡುಗಳನ್ನು, ಭಕ್ತಿಗೀತೆಗಳನ್ನು ಹಾಡಿದರು. ಸಮಾವೇಶದ ಜಾಗದಲ್ಲಿ ಕಾರ್ಯಕರ್ತರಿಗೆ ಟಿ ಶರ್ಟ್ ವಿತರಿಸುವಾಗ ನೂಕು ನುಗ್ಗಲು ಉಂಟಾಯಿತು. ಕಾರ್ಯಕರ್ತರು ಟಿ ಶರ್ಟ್ ಗಳ ಗಂಟುಗಳನ್ನು ಕಿತ್ತುಕೊಂಡು ಹೋದದ್ದು ಕಂಡುಬಂತು.
ಸಮಾವೇಶದ ಪ್ರಮುಖ ದ್ವಾರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದಾರಿಯುದ್ದಕ್ಕೂ ಬಾಳೆ ಕಂಬ, ಕಬ್ಬು ಸೇರಿದಂತೆ ವಿವಿಧ ರೀತಿಯ ಗಿಡಗಂಟಿಗಳ ಎಲೆಗಳಿಂದ ಮಾಡಿದ್ದ ಅಲಂಕಾರ ವಿಶೇಷವಾಗಿ ಗಮನ ಸೆಳೆಯಿತು.
ಸಮಾವೇಶದ ದ್ವಾರದ ಬಳಿ ವಾಲ್ಮೀಕಿ ಸಮಾಜದ ಮಹನೀಯರ ಸಣ್ಣ ಸಣ್ಣ ಕಟೌಟ್ ಗಳಿನ್ನು ಇರಿಸಲಾಗಿತ್ತು. ವಾಲ್ಮೀಕಿ, ರಾಜ ವೀರ ಮದಕರಿ ನಾಯಕ ಎಲ್.ಜಿ. ಹಾವನೂರು ಸೇರಿದಂತೆ ಹಲವು ಮಹನೀಯರ ಕಟೌಟ್ ಗಳ ಮುಂದೆ ನಿಂತು ಫೋಟೋ ತೆಗೆಯಿಸಿಕೊಳ್ಳುತ್ತಿದ್ದುದು ಕಂಡುಬಂತು.