ಕಡತಗಳೇ ಮಾತನಾಡಿ. ಕಡತಗಳ ಹಿಂದೆ ಜನರಿದ್ದಾರೆ. ಅವರ ಬೇಕು- ಬೇಡಿಕೆ ನೋವು- ನಲಿವುಗಳೆಲ್ಲವೂ ಇವೆ' ಆರವತ್ತೈದು ವರ್ಷಗಳ ಹಿಂದೆ ಪಂಡಿತ್ ಜವಹರಲಾಲ್ ನೆಹರೂ ತಮ್ಮ ಹತ್ತು ವರ್ಷಗಳ ಆಡಳಿತದ ನಂತರ ಹೇಳಿದ ಮಾತಿದು. ಆಗಲೇ ಶುರುವಾಗಿತ್ತು.
ಭಾರತದಲ್ಲಿ ಕಡತವನ್ನು ಹಣ ಮಾತ್ರ ಮಾತನಾಡಿಸುತ್ತಿದೆ’ ಎನ್ನುವ ಅಸಮಾಧಾನದ ಕೂಗು.
ಈಗ, ಕಡತಗಳು ಮಾತನಾಡುತ್ತಿಲ್ಲ. ಕಡತಗಳನ್ನು ಹಣವೇ ಮಾತನಾಡಿಸುತ್ತಿದೆ. ಕಡತಗಳು ಚಲಿಸುತ್ತಿಲ್ಲ, ಏಕೆಂದರೆ ಈಗ ಕಡತದ ಚಲನೆಗೆ ಇಂಧನ' ಮುಖ್ಯ! ಕಡತಗಳು ಈಗ ಏನನ್ನೂ ಹೇಳುತ್ತಿಲ್ಲ. ಏಕೆಂದರೆ ಅವುಗಳನ್ನು ಇತ್ಯರ್ಥಗೊಳಿಸದೇ ಉಳಿಸುವುದು ಅಥವಾ ಇತ್ಯರ್ಥಗೊಳಿಸುವುದು ಇವೆರಡೂ ಆಡಳಿತದ ದೊಡ್ಡ ಕಲೆಯಾಗಿಬಿಟ್ಟಿವೆ! ಇತ್ತೀಚಿಗೆ ಕರ್ನಾಟಕದ ಮುಖ್ಯಮಂತ್ರಿ ವಿಧಾನಸೌಧದ ಸಚಿವಾಲಯಗಳಲ್ಲಿ ಕಾದುಕುಳಿತಿರುವ ಕಡತಗಳ ಕೂಗಿಗೆ ಧ್ವನಿಯಾಗಲು ಯತ್ನಿಸಿದರು. ಸುಮಾರು ಒಂದು ಲಕ್ಷ ಏಳು ಸಾವಿರ ಕಡತಗಳು ಸಚಿವಾಲಯ, ಆಯುಕ್ತಾಲಯಗಳಲ್ಲಿ ಹಾಗೆಯೇ ಕೆಂಪುಪಟ್ಟಿ ಬಿಗಿದುಕೊಂಡು ಕೂತಿದ್ದವು. ಅವು ೬೦ ದಿನಗಳಿಂದ ಆರು ದಶಕಗಳ ಕಾಲದ್ದಾಗಿವೆ. ಇದನ್ನು ಚಲನಶೀಲ ಸರ್ಕಾರ ಏನ್ನೋಣವೇ! ಬಸವರಾಜ ಬೊಮ್ಮಾಯಿಯವರ ಕಾರ್ಯಾಲಯದಲ್ಲೇ ಸುಮಾರು ೯ ಸಾವಿರ ಕಡತಗಳಿಗೆ ಮೋಕ್ಷ ಸಿಗದೇ ಏಳೆಂಟು ತಿಂಗಳಾಯಿತು. ಸಂಪುಟದ ಸಚಿವರ ಮಟ್ಟದ ತೀರ್ಮಾನಕ್ಕಾಗಿ ಅವರವರ ಕಚೇರಿಯಲ್ಲಿ ಅವರ ಮತ್ತು ಆ ಕಡತದ
ಅರ್ಥ-ಮೌಲ್ಯ’ದ ಯೋಗ್ಯತೆಗನುಸಾರ ಪೆಂಡಿಂಗ್ ಆಗಿ ಉಳಿದಿವೆ !
ಇನ್ನು, ಆಯುಕ್ತಾಲಯಗಳಲ್ಲಿ, ಇಲಾಖಾ ಮುಖ್ಯಸ್ಥರ ಹಂತಗಳಲ್ಲಿ, ಮುನ್ಸಿಪಾಲಿಟಿಯಿಂದ ಬೃಹತ್ ಮಹಾನಗರ ಪಾಲಿಕೆಗಳಲ್ಲಿ, ಜಿಲ್ಲಾ, ತಾಲ್ಲೂಕು ಹಂತದಲ್ಲಿ ಬಹುಶಃ ಲೆಕ್ಕ ಹಾಕಲಾರದಷ್ಟು ಕಡತಗಳು ದಾದ್ ನಹೀ, ಪುಕಾರ್ ನಹೀ' ಎನ್ನುವ ಸ್ಥಿತಿಯಲ್ಲಿ ಬಿದ್ದುಕೊಂಡಿವೆ. ಸರ್ಕಾರವೇ ಘೋಷಿಸಿಕೊಂಡಂತೆ ೪೧ ಇಲಾಖೆಗಳ ವ್ಯಾಪ್ತಿಯಲ್ಲಿ ೨,೧೭,೦೧೫ ಕಡತಗಳು ಮೂಮೆಂಟ್ ಇಲ್ಲದ ಸ್ಥಿತಿಯಲ್ಲಿವೆಯಂತೆ! ಕಂದಾಯ ಇಲಾಖೆಯ ಸಚಿವಾಲಯದಲ್ಲಿ ೧೧೨೨೧ ಕಡತ ಸಚಿವರ ತೇರ್ಮಾನಕ್ಕಾಗಿ ಕಾಯುತ್ತಿದ್ದರೆ, ಆಡಳಿತ ಸುಧಾರಣಾ ಇಲಾಖೆಯಲ್ಲಿ ೧೦,೩೬೬ ಒಳಾಡಳಿತದಲ್ಲಿ ೮೩೧೭, ಆರ್ಥಿಕ ಇಲಖೆಯಲ್ಲಿ ೭೩೬೪ ಅರಣ್ಯ ಇಲಾಖೆಯಲ್ಲಿ ೫೪೩೧... ಹೀಗೆ ಪ್ರತಿ ಇಲಾಖೆಗಳಲ್ಲಿಯೂ ಕಡತಗಳು
ಬಾಬು’ಗಳ ಬರ ನೋಡುತ್ತಿವೆ!
ಕಳೆದ ಎಂಟು ತಿಂಗಳ ಹಿಂದೆ ಕಂದಾಯ ಸಚಿವರು ಕಡತ ವಿಲೇವಾರಿ ಸಪ್ತಾಹ ಘೋಷಿಸಿದರು. ಮುಖ್ಯಮಂತ್ರಿಗಳು ಎಲ್ಲ ಸಂಪುಟ ಸಚಿವರಿಗೆ ಕಡತ ಯಜ್ಞ ನಡೆಸಲು ಆದೇಶಿಸಿದರು. ಎರಡೇ ದಿನದಲ್ಲಿ ಉನ್ನತ ಶಿಕ್ಷಣ ಸಚಿವರಿಂದ ಈಗ ಝೀರೋ ಪೆಂಡೆನ್ಸಿ' ಎಂಬ ಘೋಷಣೆ ಬಂತು. ಕಂದಾಯ ಸಚಿವರು ನಮ್ಮ ಸಚಿವಾಲಯದಲ್ಲಿ ಹನ್ನೊಂದು ಸಾವಿರ ಕಡತಗಳಿವೆ ಎಂದು ಘೋಷಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಇತ್ಯರ್ಥ ಪಡಿಸಲು ಸೂಚಿಸಿ ಗ್ರಾಮ ವಾಸ್ತವ್ಯಕ್ಕೆ ತೆರಳಿಬಿಟ್ಟರು. ಮುಖ್ಯಮಂತ್ರಿಗಳ ಕಚೇರಿಯಾದಿಯಾಗಿ ಎಲ್ಲ ಇಲಾಖೆಗಳಲ್ಲಿ ಕಡತ ವಿಲೇ ಹೆಸರಿನಲ್ಲಿ ಒಬ್ಬರ ಟೇಬಲ್ನಿಂದ ಮತ್ತೊಬ್ಬರ ಟೇಬಲ್ಗೆ ಸ್ಥಳಾಂತರಿಸುವ ಪ್ರಕ್ರಿಯೆ ಜರುಗಿತೇ ವಿನಾ, ಕಡತದ ಓದು, ಪರಿಹಾರ ದೊರೆತಿಲ್ಲ.. ಜನಸಾಮಾನ್ಯರಿಗೆ ಇದರ ಪ್ರಯೋಜನ ಲಭ್ಯವಾಗಲಿಲ್ಲ. ವರ್ಷಾನುಗಟ್ಟಲೇ ಕೊಳೆಯುತ್ತಿರುವ ಕಡತಗಳ ತೀರ್ಮಾನ ಅಥವಾ ಫಲಶ್ರುತಿ, ಮರುಸುತ್ತೋಲೆ ಅಥವಾ ನಿರ್ಣಯ ಯಾವುದೂ ಬಂದೇ ಇಲ್ಲ. ಬದಲು ಸಾಧನೆಯ ಘೋಷಣೆಗಳಷ್ಟೇ ಬಂದವು. ಯಾಕೆ ಹೀಗೆ? ಪ್ರತಿ ಕಡತವವೂ ಒಂದೊಂದು ಕಥೆ ಹೇಳುತ್ತವೆ. ಸರ್ಕಾರಕ್ಕೆ ಸಲ್ಲಿಸಿದ ಮನವಿ, ಪರಿಹಾರ, ಕೋರಿಕೆ ಅರ್ಜಿ ಇವುಗಳ ಹಿಂದೆ ಜನರೇ ಬೀಳಬೇಕೇ? ಅಲೆದಾಡಬೇಕೇ? ಅಥವಾ ಎಪ್ಪತ್ತೈದು ವರ್ಷದಲ್ಲಿ ಈ ಆವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೇ ಆಗಿಲ್ಲ ಎಂದರೆ ಇಂತಹ ದೌರ್ಭಾಗ್ಯ ಇನ್ನೊಂದಿರಲಿಕ್ಕಿಲ್ಲ. ದೋಷ ಇರುವುದು ಕಡತದ ವಿಲೇವಾರಿಯಲ್ಲಿ ಅಲ್ಲ. ಕಡತ ಓಡಿಸುವವರು ಕಂಡುಕೊಂಡ ಅದರೊಳಗಿನ
ಮೌಲ್ಯ’ದ ಮೇಲೆ. ಅದರ ಹಣಭಾರದ ಮೇಲೆ ಇತ್ಯರ್ಥವಾಗುತ್ತಿರುವುದೇ ಇದಕ್ಕೆ ಕಾರಣ.
ರಾಮಕೃಷ್ಣ ಹೆಗಡೆ ನೇತೃತ್ವದ ಕಾಂಗ್ರೆಸ್ಸೇತರ ಪ್ರಥಮ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗ (೧೯೮೩) ಸಾರ್ವಜನಿಕರ ಪ್ರತಿ ಅರ್ಜಿಗೂ ಮರು ಉತ್ತರ ಕೊಡುವ ವ್ಯವಸ್ಥೆ ಮತ್ತು ಅದರ ಕಡತ ಸಂಖ್ಯೆಯನ್ನು ತಿಳಿಸಲಾಗುತ್ತಿತ್ತು. ಮುಖ್ಯಮಂತ್ರಿ ಕಚೇರಿಗಳಿಂದ ಜನಸಾಮಾನ್ಯರಿಗೂ ಮರು ಉತ್ತರ ಬರುವಂತೆ ನೋಡಿಕೊಳ್ಳಲಾಗಿತ್ತು. ಸಾರ್ವಜನಿಕರ ಅಹವಾಲು, ಕುಂದುಕೊರತೆಗಳ ಆಲಿಕೆ ಆರಂಭವಾಗಿದ್ದೇ ಆಗ.
ವಿರೇಂದ್ರ ಪಾಟೀಲ ಮುಖ್ಯಮಂತ್ರಿಯಾದಾಗ ಮೊದಲು ಕೈಗೆತ್ತಿಕೊಂಡಿದ್ದು ಬಾಕಿ ಉಳಿದ ಅಥವಾ ಇತ್ಯರ್ಥವಾಗದ ಕಡತಗಳ ವಿಲೇವಾರಿಯನ್ನು. ಕರ್ನಾಟಕ ಕಂಡ ಅತ್ಯಂತ ಬಿಗು ಆಡಳಿತ ಅವರದ್ದಾಗಿತ್ತು. ಹಣಕಾಸು ಸಚಿವರಾಗಿದ್ದ ರಾಜಶೇಖರಮೂರ್ತಿ ತಮ್ಮ ಸಚಿವಾಲಯ ಬಿಟ್ಟು ಹೊರ ಪ್ರವಾಸ ಮಾಡಿದ್ದೇ ಕಡಿಮೆ. ಕಡತಗಳನ್ನು ಮಾತನಾಡಿಸಿ, ಭ್ರಷ್ಟರನ್ನು ನಡುಗಿಸಿದ್ದರಿಂದಲೇ ಬರಿದಾಗಿದ್ದ ಬೊಕ್ಕಸವನ್ನು ಕೇವಲ ಆರು ತಿಂಗಳಲ್ಲಿ ಭರ್ತಿ ಮಾಡಿದ್ದರು. ಆ ಸರ್ಕಾರದ ಆರ್ಥಿಕ ಶಿಸ್ತು, ಆಡಳಿತದ ಹಿಡಿತ, ಸಾರ್ವಜನಿಕ ಸಮಸ್ಯೆಗಳಿಗೆ ಕಾನೂನಾತ್ಮಕ ಸ್ಪಂದನೆ ಅದ್ಭುತವಾಗಿದ್ದನ್ನು ಇಂದಿಗೂ ಅಂದಿನ ಅಧಿಕಾರಿಗಳು ಸ್ಮರಿಸುತ್ತಾರೆ.
ಪ್ರತಿ ಕಡತಗಳ ಹಿಂದೆ ಒಂದು ಕಥೆ ಇದ್ದೇ ಇರುತ್ತೆ. ಸಮಸ್ಯೆಗಳು, ನೋವು ನಲಿವುಗಳು, ಸಾರ್ವಜನಿಕ ಕೋರಿಕೆಗಳು ಅಥವಾ ಆಡಳಿತದ ಲೋಪದೋಷಗಳು ಎಲ್ಲವೂ ಇದ್ದೇ ಇರುತ್ತವೆ. ದುರಂತ ಎಂದರೆ, ಅವುಗಳನ್ನು, ಅದನ್ನು ನೋಡುವ ದೃಷ್ಟಿಕೋನ ಮಾತ್ರ ಸರ್ಕಾರಿ ಸಿಬ್ಬಂದಿ, ಜನಪ್ರತಿನಿಧಿಗಳಲ್ಲಿ, ಆಡಳಿತ ಚುಕ್ಕಾಣಿ ಹಿಡಿದವರಲ್ಲಿ ಇಲ್ಲ. ಕಡತಗಳು ಮಾತನಾಡಬೇಕು. ಕಡತಗಳ ಹಿಂದೆ ಜನರಿದ್ದಾರೆ ಎನ್ನುವ ನೆಹರು ಮಾತಿಗೆ ಈಗ ಲವಲೇಶವೂ ಕಿಮ್ಮತ್ತಿಲ್ಲ. ಕಡತಗಳು ಈಗ ಹಣ ಇದ್ದರಷ್ಟೇ ಮಾತನಾಡುತ್ತವೆ.
ಸಮಾಜದ ಕಟ್ಟಕಡೆಯ ಹಳ್ಳಿಯ ರೈತ ತನ್ನ ಪಹಣಿ ಪತ್ರಿಕೆ, ಲೋಪ, ಅತಿವೃಷ್ಟಿ ಅನಾವೃಷ್ಟಿಯಿಂದ ಆದ ಹಾನಿ, ಪರಿಹಾರ ಅಥವಾ ತಮ್ಮೂರಿಗೆ ರಸ್ತೆ- ಬೆಳಕು ಕುರಿತ ಒಂದು ಮನವಿ ಸಲ್ಲಿಸಿದರೆ ಅದು ತಾಲ್ಲೂಕು ಕಚೇರಿಯಿಂದ ಒಂದಿನಿತೂ ಮುಂದೆ ಹೋದರೆ ಹೇಳಿ. ಅದೇ ಮನವಿ ಒಬ್ಬ ಮರಿ ಪುಢಾರಿಯ ಮೂಲಕ ಶಾಸಕರಿಗೆ ತಲುಪಿ, ಜನಪ್ರತಿನಿಧಿಗಳ ಒತ್ತಡವಿದ್ದರೆ ಅಂತೂ ಮುಂದೆ ಚಲೀಸೀತು. ಕಡತಕ್ಕೆ ಹಣದ ಟಾನಿಕ್ ಸಿಕ್ಕರೆ ವೇಗ ಪಡೆದೀತು. ತೀರ್ಮಾನವೂ ಆದೀತು. ಬಡ ಗಮಾರನಿಗೆಲ್ಲಿ ಗೊತ್ತು ಇವೆಲ್ಲವುಗಳ ಕಸರತ್ತು? ಹಾಗಂತ, ಅವನ ಹೆಸರಿಗೆ ಇನ್ನಾರೋ ಪರಿಹಾರ ಪಡೆದು ಸಂತುಷ್ಟರಾಗಿರುತ್ತಾರೆ. ಅವನೇ ಸಲ್ಲಿಸಿದ ಕಡತದಿಂದ !!ಫೈಲ್ ಮೂಮೆಂಟ್ ಇಲ್ಲಾರಿ, ವಿಧಾನಸೌಧ, ಸೆಕ್ರೇಟರಿಯೇಟ್ಗೆ ಕಡತ ಹೋಯಿತೆಂದರೆ ಮುಗಿತು ಎಂದರ್ಥ..' ಇದು ಸಕಾರಿ ವ್ಯವಸ್ಥೆ ಬಲ್ಲ ಸಾಮಾನ್ಯನ ಬಾಯಲ್ಲಿಯೂ ಕೇಳಿಬರುವ ಮಾತು. ಸಿಬ್ಬಂದಿ ವರ್ಗಾವಣೆ, ನೇಮಕಾತಿ, ಗುತ್ತಿಗೆದಾರನ ಬಿಲ್, ಲ್ಯಾಂಡ್ ಅಲಾಟ್ಮೆಂಟ್, ಸಬ್ಸಿಡಿ ಇತ್ಯಾದಿ ಕಡತಗಳು ಮಾತ್ರ ಅದರ ಶಕ್ತ್ಯಾನುಸಾರ ಮೂಮೆಂಟ್ ಪಡೆಯುತ್ತವೆ, ಇತ್ಯರ್ಥ ಕಾಣುತ್ತವೆ! ಹಾಗಂತ ಬೃಹತ್ ಯೋಜನೆಗಳು, ಕೋಟ್ಯಂತರ ರೂಪಾಯಿ ಕಾಮಗಾರಿಗಳು, ಪರ್ಮಿಟ್ಗಳು ಇವ್ಯಾವುಗಳ ಕಡತಗಳೂ ಪೆಂಡಿಂಗ್ ಇರುವುದಿಲ್ಲ! ಕಾರಣ ಇವುಗಳ ``ಭಾರ'' ಜಾಸ್ತಿ. ``ಮೌಲ್ಯ'' ಅಧಿಕ. ಹಾಗಾಗಿಯೇ ಕಡತ ಮಾತನಾಡುತ್ತಿಲ್ಲ. ಇವುಗಳ ಹಿಂದಿನ
ಮೌಲ್ಯ’-ಭಾರ' ಮಾತನಾಡುತ್ತವೆ. ಇತ್ತೀಚಿಗೆ ಸುಪ್ರೀಂ ಕೋರ್ಟಿನ ನ್ಯಾಯವಾದಿಯೋರ್ವರು ಈ ಪೆಂಡಿಂಗ್ ಫೈಲ್ಗಳ ಬಗ್ಗೆ ಒಂದು ಸ್ವಾರಸ್ಯಕರ ಹಾಗೂ ಗಮನಾರ್ಹ ಸಂಗತಿಯನ್ನು ಬಿಚ್ಚಿಟ್ಟರು. ಕಳಸಾ ಬಂಡೂರಿ ಮಹದಾಯಿ ಯೋಜನೆ ವಿವಾದದ ಕುರಿತು ಮಾತು ಬಂದಾಗ, ಸರ್ಕಾರದಿಂದ ಯಾವುದೇ ತೀರ್ಮಾನ, ಕಡತಗಳ ಮೂವ್ಮೆಂಟ್ ಆಗುತ್ತಿಲ್ಲ, ಅದೇ ಇದಕ್ಕೆಲ್ಲ ಕಾರಣ. ಅದೇ ಕೆಲವು ಯೋಜನೆಗಳಿಗೆ ನೋಡಿ ಎಷ್ಟು ಫಟಾಫಟ್ ತೀರ್ಮಾನ ಆಗುತ್ತದೆಂದು. ಏಕೆಂದರೆ ಈ ಕಡತಗಳ ಹಿಂದೆ ಬಿದ್ದವರು
ಆಸಕ್ತ ಗುತ್ತಿಗೆದಾರರು’ ಅಥವಾ ಜನಪ್ರತಿನಿಧಿಗಳು, ಮಂತ್ರಿ ಮಹೋದಯರು, ಇನ್ಯಾವುದೋ ಕಂಪನಿಗಳವರು ಇರುತ್ತಾರೆ ಎಂದರು.
ಕಳಸಾ ಬಂಡೂರಿ ಇಂತಹ ಯೋಜನೆಗಳ ಇತ್ಯರ್ಥ ತೀರ್ಮಾನ ಆಗಬೇಕಿದ್ದರೂ ಕೂಡ ಅಂತಹ `ಶಕ್ತಿ'' ಬೇಕಾಗುತ್ತದೆ. ಕರ್ನಾಟಕ ಬಿಡಿ, ದೇಶದ ಯಾವುದೇ ಯೋಜನೆಗಳ ಫೈಲ್ ಹಳ್ಳಿಯಿಂದ ದಿಲ್ಲಿಯವರೆಗೆ ಸರಾಗವಾಗಿ ಚಲಿಸಬೇಕಿದ್ದರೆ ಅದರ ಹಿಂದಿರುವ ಇಂತಹ ಶಕ್ತಿಗಳಿಂದಷ್ಟೇ ಸಾಧ್ಯ. ಬಹುತೇಕ ಬೃಹತ್ ಯೋಜನೆಗಳ ಗುತ್ತಿಗೆ ಪಡೆಯುವ ಬೃಹತ್ ಕಾರ್ಪೋರೇಟ್ ಕಂಪನಿಗಳು ಈ ಕಡತಗಳ ವಿಲೇವಾರಿಯ ಹಿಂದಿರುತ್ತವೆ. ಹಾಗಾಗಿಯೇ ಅವು ಇತ್ಯರ್ಥ ಕಾಣುತ್ತವೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ. ಕೇರಳ ಸರ್ಕಾರ ಇತ್ತೀಚೆಗೆ ತಮ್ಮಲ್ಲಿ ಬಾಕಿ ಉಳಿದ ಕಡತಗಳ ಕುರಿತು ಬಂದ ಟೀಕೆಗೆ ಹೌಹಾರಿತ್ತು. ಸ್ವತಃ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸಚಿವರು, ಅಧಿಕಾರಿಗಳು ತಿಂಗಳಲ್ಲಿ ನಾಲ್ಕು ದಿನ ಕಡತ ವಿಲೇವಾರಿ-ಇತ್ಯರ್ಥಕ್ಕಾಗಿಯೇ ಮೀಸಲಿಟ್ಟರು. ಅಲ್ಲದೇ ಒಂದು ರವಿವಾರ ಇಡೀ ಕಚೇರಿ ತೆರೆದು ಆಂಧ್ರಪ್ರದೇಶ, ತೆಲಂಗಾಣ, ಸ್ವತಃ ದೆಹಲಿ ಆಡಳಿತದಲ್ಲೂ ಕೂಡ ಇದೇ ಬಾಕಿ ಕಡತಗಳದ್ದೇ ಸಮಸ್ಯೆ. ಪ್ರತಿ ಕಡತ ತೆರೆದಾಗ ಸಾರ್ವಜನಿಕರ ನೋವು, ಅವರ ಒದ್ದಾಟಗಳ ಅರಿವು ಕಾಣುತ್ತದೆ. ಹಾಗಂತ ಕಡತಗಳು ಮಾತನಾಡುತ್ತಿಲ್ಲ ಎಂದಿಲ್ಲ. ಬಹುತೇಕ ಹಗರಣಗಳು ಬೆಳಕಿಗೆ ಬಂದಾಗ ಮಾತನಾಡಿದ್ದು ಕಡತಗಳೇ. ೨ಜಿ, ಏಷಿಯಾಡ್, ಒಲಿಂಪಿಕ್, ಮೇವು ಹಗರಣ, ಕರ್ನಾಟಕದ ಬಿ.ಡಿಎ, ಕೆಎಚ್.ಬಿ, ಕೋವಿಡ್ ಹಗರಣಗಳಷ್ಟೇ ಅಲ್ಲ, ಬೃಹತ್ ಯೋಜನೆಗಳು, ಹಣಕಾಸು ಹಗರಣಗಳೆಲ್ಲವನ್ನು ಬಯಲು ಮಾಡಿದ್ದು ಕಡತಗಳೇ.! ತೊಂಬತ್ತರ ದಶಕದ ನಂತರ ನಾವು ಮಾಹಿತಿ ತಂತ್ರಜ್ಞಾನ, ಕಂಪ್ಯೂಟರೀಕರಣಗಳ ಬಗ್ಗೆ ಕೊಚ್ಚಿಕೊಳ್ಳುತ್ತೇವೆ. ಇ-ಆಡಳಿತ ಮತ್ತು ಫೈಲ್ ಕೋಡಿಂಗ್ ವ್ಯವಸ್ಥೆ ಎಲ್ಲವೂ ಇವೆ. ಪ್ರಾಧಾನ್ಯತೆ ಮೇರೆಗೇ ಕಡತಗಳ ವಿಲೇವಾರಿ ಆಗಬೇಕೆಂಬ ನಿರ್ಣಯವಿದೆ. ಹಾಗಿದ್ದೂ ಈ ಕಂಪ್ಯೂಟರೀಕರಣ ಕಾಲದಲ್ಲಿಯೂ ಕಡತ ವಿಲೇವಾರಿಯ, ಕಡತ ಬಾಕಿ ಎಂದಿರುವ ಅಗಣಿತ ಜ್ಞಾನ ಅರ್ಥ ಮಾಡಿಕೊಳ್ಳಿ. ಅಂದರೆ ಕಡತಗಳ ಹಿಂದೆ ಜನರಿದ್ದಾರೆ ಎನ್ನುವುದು ಅಂದಿನ ಮಾತು, ಈಗ ಕಂಪ್ಯೂಟರ್ ಹಿಂದೆ ಜನರ ಹಣವಿದೆ ಎನ್ನುವ ಸ್ಥಿತಿಗೆ ತಲುಪಿದ್ದೇವೆ. ಸರ್ಕಾರ ಎಂದರೆ ಮಹಾಸಾಗರ. ವಿಧಾನಸೌಧಕ್ಕೆ ಕಡತ ಹೋದರೆ ಇನ್ನು ಅಲ್ಲಿಯೇ ಸಮಾಪ್ತಿಯಾಗುವುದೇ ಎಂಬುವ ಬಹುತೇಕರ ಅಂಬೋಣ ನಿಜ ಕೂಡ. ವಿಧಾನಸೌಧದಲ್ಲಿ ಕಡತ ಮಾತನಾಡಬೇಕು, ಚಲಿಸಬೇಕು ಎಂದರೆ ಅದರ ಬೆನ್ನು ಬಿದ್ದು ಓಡಾಡಿಸುವ ತಾಕತ್ತು, ಸಮಯ, ಶ್ರಮ ಎಲ್ಲವೂ ಇದ್ದರೆ ಮಾತ್ರ ಸಾಧ್ಯ! ಇಷ್ಟೆಲ್ಲವನ್ನೂ ಏಕಾಗಿ ಪ್ರಸ್ತಾಪಿಸಬೇಕಾಯಿತೆಂದರೆ ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿಗಳು ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ನೇಮಿಸಿ ಆದೇಶಿಸಿದಾಗ ನೌಕರ ಸಂಘದ ಅಧ್ಯಕ್ಷರು ಸನ್ಮಾನಿಸಿದು. ಆ ಸಭೆಯಲ್ಲಿ ಬೊಮ್ಮಾಯಿ ಒಂದು ಪ್ರಸ್ತಾವನೆ ಮಂಡಿಸಿದರು.
ಇನ್ನು ಮುಂದೆ ನಿತ್ಯ ಒಂದು ತಾಸು ಹೆಚ್ಚು ಕೆಲಸ ಮಾಡಿ. ಆಡಳಿತ ವ್ಯವಸ್ಥೆ ಚುರುಕುಗೊಳಿಸೋಣ. ಕಡತಗಳು ಪೆಂಡಿಂಗ್ ಇರಬಾರದು. ಶ್ರದ್ಧೆ ನಿಷ್ಟೆಗಳು ನೌಕರರಲ್ಲಿ ಅಗತ್ಯ ಎಂಬ ಸಲಹೆ ನೀಡಿದರು. ತಮಾಷೆ ಎಂದರೆ ಇತ್ತೀಚೆಗೆ ನಡೆದ ಸಮೀಕ್ಷೆಯಂತೆ ವಿಧಾನಸೌಧದ ಸಚಿವಾಲಯದ ಸಿಬ್ಬಂದಿ ಪ್ರತಿ ತಿಂಗಳ ಅವರ ಒಟ್ಟಾರೆ ಕೆಲಸದ ಪ್ರಮಾಣ ಶೇ ೬.೮ರಿಂದ ೯.೫ರವರೆಗೆ ಮಾತ್ರ!. ಅಂದರೆ ಕೆಲಸದ ಅವಧಿಯಲ್ಲಿ ಕೆಲಸ ಮಾಡುವ ಸಮಯ ನಿತ್ಯ ಒಂದು-ಒಂದೂವರೆ ತಾಸು ಎಂದಾಯಿತು. ತಿಂಗಳ ೨೪ ದಿನಗಳಲ್ಲಿ ಒಟ್ಟಾರೆ ಕೆಲಸ ಮಾಡುವುದೇ ಆರರಿಂದ ಎಂಟು ದಿನ ಮಾತ್ರ ಎನ್ನುವಂತಾಯಿತು!.
ಇದು ವಿಧಾನಸೌಧ ಸಚಿವಾಲಯದ ಕಥೆಯಾದರೆ, ತುಸು ಹೆಚ್ಚು ಕರ್ತವ್ಯ ನಿರ್ವಹಣೆ ನಡೆಯುವುದೇ ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗಳಲ್ಲಿ. ಜನರೇ ಕಚೇರಿಗಳಿಗೆ ಬರುವುದರಿಂದ ಕಡತಗಳ ಹಿಂದೆ ದುಂಬಾಲು ಬೀಳುವರಿದ್ದಾರೆ. ಅದಕ್ಕೂ ಹೆಚ್ಚಾಗಿ ಜನರ ಕೆಲಸ ಮತ್ತು ಕಡತಗಳ ಹಿಂದೆ `ಮೌಲ್ಯ’ ದೊರೆಯುವುದರಿಂದ ಇವು ಸ್ವಲ್ಪ ಮುಂದೆ ಚಲಿಸುತ್ತವೆ.
ಕಡತಗಳೆಂದರೆ ಒಂದು ತೀರ್ಮಾನ, ಅನುಮೋದನೆ, ಸಲಹೆ ಇರುತ್ತವೆ. ದುರಂತವೆಂದರೆ ಇವ್ಯಾವ ತಿರ್ಮಾನ ನೀಡದೇ ಪೆಂಡಿಂಗ್ ಇಡುವುದೇ ಕಾರ್ಯವಾದಂತಾಗಿದೆ!.
ಹೀಗಾಗಿಯೇ ಮೋದಿಯೇ ಬರಲಿ. ಬೊಮ್ಮಾಯಿ, ಕೇಜ್ರಿವಾಲ್ರೇ ಬರಲಿ, ಅಣ್ಣಾ ಹಜಾರೆಯೇ ಆಡಳಿತ ಚುಕ್ಕಾಣಿ ಹಿಡಿಯಲಿ. ಸರ್ಕಾರಿ ಯಂತ್ರ, ಈ ವ್ಯವಸ್ಥೆ ಬದಲಾಗದು ಎನ್ನುವ ಹತಾಶ ಮನೋಭಾವನೆಗೆ ಜನ ಬಂದುಬಿಟ್ಟಿದ್ದಾರೆ. ನಿಮ್ಮನ್ನು ಆರಿಸಿ ನೇಮಿಸಿದ್ದೇ ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸಲು. ನಿರ್ಧಾರ, ನೀತಿ ನಿರೂಪಣೆಗಾಗಿ.. ಈ ಸಾಂವಿಧಾನಿಕ ಹುದ್ದೆಯಲ್ಲಿನ ವ್ಯಕ್ತಿಯಿಂದ ಕಾರ್ಯವೇ ನಡೆಯುತ್ತಿಲ್ಲ ಎನ್ನುವ ಆರೋಪದಲ್ಲಿ ಸತ್ಯಾಂಶವಿದೆ. ಕಾರ್ಪೋರೇಟ್ ಕಂಪನಿಗಳಲ್ಲಿ ಇರುವಂತೆ ಸರ್ಕಾರಿ ವ್ಯವಸ್ಥೆಯಲ್ಲಿ ಸುಧಾರಣೆ ಏಕಿಲ್ಲ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ಈಗ ಕಡತಗಳನ್ನು ಹಣ ಮಾತನಾಡಿಸುತ್ತಿದೆ ಅಷ್ಟೇ !!