ಅಡಿಕೆ ಎಲೆಗೆ ಚುಕ್ಕಿರೋಗ: ಔಷಧಕ್ಕಾಗಿ ೧೦ ಕೋ. ರೂ. ಬಿಡುಗಡೆ

ಕಡೂರು
Advertisement

ಕಡೂರು: ಮಲೆನಾಡು ಭಾಗದಲ್ಲಿ ಅಡಿಕೆ ಎಲೆ ಚುಕ್ಕಿರೋಗದಿಂದಾಗಿ ಬೆಳೆಗಾರರು ಕಂಗೆಟ್ಟಿದ್ದು, ರೋಗ ನಿಯಂತ್ರಣದ ಉದ್ದೇಶದಿಂದ ಔಷಧಕ್ಕಾಗಿ ಸರ್ಕಾರ ೧೦ ಕೋ. ರೂ. ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಕಡೂರು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಮಾತನಾಡಿ ಸರಕಾರ ಈ ರೋಗವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಜ್ಞಾನಿಗಳು ನೀಡುವ ವರದಿ ಆಧರಿಸಿ ಸರಕಾರ ರೋಗ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನುಕೈಗೊಂಡು ರೈತರ ಸಂಕಷ್ಟಕ್ಕೆ ಸ್ಪಂದಿಸಲು ಬದ್ಧವಾಗಿದೆ ಎಂದು ಹೇಳಿದರು. ಮಲೆನಾಡು ಭಾಗದಲ್ಲಿ ಅಡಿಕೆ ಎಲೆಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದೆ. ಈ ಸಂಬಂಧ ರಾಜ್ಯ ಸರಕಾರಕ್ಕೆ ಮಾಹಿತಿ ಇದ್ದು, ರೋಗದ ಬಗ್ಗೆ ರಾಜ್ಯ ಹಾಗೂ ಕೇಂದ್ರದ ಹಲವು ವಿವಿಗಳ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ. ರಾಜ್ಯ ಸರಕಾರ ರೋಗ ನಿಯಂತ್ರಣದ ಉದ್ದೇಶದಿಂದ ಕೂಡಲೇ ೧೦ ಕೋ. ರೂ. ಅನುದಾನವನ್ನು ಔಷಧಕ್ಕಾಗಿ ಬಿಡುಗಡೆ ಮಾಡಿದೆ ಎಂದರು. ಈ ಸಂಬಂಧ ವಿಜ್ಞಾನಿಗಳಿಗೆ ಸೂಚನೆ ನೀಡಿದ್ದು, ರೋಗಕ್ಕೆ ಕಾರಣ ಮತ್ತು ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶೀಘ್ರ ವರದಿ ನೀಡುವಂತೆ ಸೂಚಿಸಲಾಗಿದೆ. ವಿಜ್ಞಾನಿಗಳ ವರದಿ ಆಧರಿಸಿ ಸರಕಾರ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಲಿದೆ. ರೋಗ ನಿವಾರಣೆ ಹಾಗೂ ನಿಯಂತ್ರಣಕ್ಕೆ ಎಷ್ಟೇ ಖರ್ಚಾದರೂ ಸರಕಾರ ಭರಿಸಲು ಸಿದ್ಧವಿದೆ ಎಂದರು.