ಮೈಸೂರಿನ ಹಲವೆಡೆಗಳಲ್ಲಿ ಮಸೀದಿ ಮಾದರಿಯ ಬಸ್ ನಿಲ್ದಾಣಗಳು ನಿರ್ಮಾಣಗೊಂಡಿದ್ದು, ತೀವ್ರ ವಿರೋಧಕ್ಕೆ ಕಾರಣವಾಗಿದೆ. ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಹಲವೆಡೆಗಳಲ್ಲಿ ಮಸೀದಿ ಮಾದರಿಯ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟಿಪ್ಪು ಪ್ರತಿಮೆ ನಿರ್ಮಾಣ ವಿಚಾರಗಳ ಬೆನ್ನಲ್ಲೇ ಈಗ ಇಂಥದ್ದೊಂದು ಬೆಳವಣಿಗೆಗಳು ನಡೆಯುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಈ ಮಸೀದಿ ಮಾದರಿಯ ಬಸ್ ನಿಲ್ದಾಣಗಳ ಗುಂಬಜ್ ಮೇಲೆ ಈಗ ರಾತ್ರಿ ಬೆಳಗಾಗುವಷ್ಟರಲ್ಲಿ ಕಳಶ ನಿರ್ಮಾಣ ಮಾಡಲಾಗಿದೆ. ಬಸ್ ನಿಲ್ದಾಣದ ಮೂರು ಗುಂಬಜ್ ಗಳ ಮೇಲೆ ಕಳಸ ನಿರ್ಮಿಸುವ ಮೂಲಕ ವಿವಾದಕ್ಕೆ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಗರಂ ಆಗಿದ್ದಾರೆ.