ಬಾಗಲಕೋಟೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ಗೌಪ್ಯ ಸಂಚಾರ ನಡೆಸಿದ್ದಾರೆ. ಅವರ ಭೇಟಿ ರಾಜಕೀಯ ಉದ್ದೇಶಕ್ಕೋ ಅಥವಾ ವೈಯಕ್ತಿಕ ವ್ಯವಹಾರಕ್ಕೋ ಎಂಬುದು ನಿಗೂಢವಾಗಿಯೇ ಉಳಿದಿದೆ.
ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ನಡೆದ ಮಾಜಿ ಸಚಿವ ವಿನಯ ಕುಲಕರ್ಣಿ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ ಅವರು ನೇರವಾಗಿ ಯಾರಿಗೂ ಮಾಹಿತಿ ನೀಡದೆ ಬಾದಾಮಿ ಕ್ಷೇತ್ರದಲ್ಲಿ ಸಂಚರಿಸಿದ್ದಾರೆ. ಪೊಲೀಸ್ ಭದ್ರತೆ, ಪ್ರೊಟೊಕಾಲ್ ನಿರಾಕರಿಸಿರುವ ಅವರು ವೈಯಕ್ತಿಕ ವಾಹನದಲ್ಲಿ ಒಬ್ಬರೇ ಆಗಮಿಸಿ ಸುತ್ತಾಡಿ ಹೋಗಿದ್ದಾರೆ. ಅವರು ಬಂದು ಹೋಗಿರುವ ವಿಚಾರ ಕಾಂಗ್ರೆಸ್ ಮುಖಂಡರು, ಪಕ್ಷದ ಪದಾಧಿಕಾರಿಗಳಿಗೂ ತಿಳಿದಿಲ್ಲ.
ಕೆರೂರು ಬಳಿಯ ಹಲವು ಹಳ್ಳಿಗಳಲ್ಲಿ ಅವರು ಜಮೀನು ವೀಕ್ಷಿಸಿದ್ದಾರೆ ಎಂಬ ಮಾತುಗಳಿದ್ದು, ಬಾದಾಮಿ ಪಟ್ಟಣದಲ್ಲೂ ಡಿಕೆಶಿ ಕಾಣಿಸಿಕೊಂಡಿರುವ ಮಾತುಗಳು ಕೇಳಿ ಬಂದಿವೆ. ಕೆರೂರು ಪಟ್ಟಣದಲ್ಲಿ ಕೆಲ ಯುವಕರು ಅವರನ್ನು ಗುರುತಿಸಿ ಮಾತನಾಡಿದ್ದು, ವ್ಯಕ್ತಿಯೊಬ್ಬರು ತೆಗೆದಿರುವ ಚಿತ್ರ ಸಂಯುಕ್ತ ಕರ್ನಾಟಕಕ್ಕೆ ಲಭ್ಯವಾಗಿದೆ.