ಬೆಂಗಳೂರು: ಬೆಂಗಳೂರಿನ ಜಾಲಹಳ್ಳಿ ಗಂಗಮ್ಮ ಸರ್ಕಲ್ ಬಳಿ ಮಂಗಳವಾರ ರಾತ್ರಿ 9.30ಕ್ಕೆ ಸ್ನೇಹಿತರ ಜೊತೆ ಕ್ರಿಕೆಟ್ ಆಟ ಮುಗಿಸಿ ಮನೆಗೆ ತೆರಳುತ್ತಿದ್ದಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದು, ಬೈಕ್ ಸವಾರ ಸಂದೀಪ್(37) ತಲೆಗೆ ಗಂಭೀರವಾದ ಗಾಯವಾಗಿತ್ತು. ಸಂದೀಪ್(37) ವಿದ್ಯಾರಣ್ಯಪುರದ ನಿವಾಸಿ. ತಲೆಗೆ ಗಂಭೀರವಾದ ಗಾಯವಾದ ಹಿನ್ನೆಲೆ, ಆತನನ್ನು ಎಚ್ಎಮ್ಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಎಚ್ಎಮ್ಟಿ ಆಸ್ಪತ್ರೆ ಸಿಬ್ಬಂದಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು. ಬಳಿಕ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಗಾಯವಾಗಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿನ್ನೂ ಕೋಮಾದಲ್ಲಿದ್ದಾರೆ.
ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಟೇ ಸಂದೀಪ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.