ಬಳ್ಳಾರಿ: ಮಗನನ್ನು ಸಾಯಿಸಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತಂದೆ ಯಂಕಪ್ಪ ಈಡಿಗೇರ್ (೩೨), ಮಗ ವಿಜಯ (೫) ಮೃತ ದುರ್ದೈವಿಗಳು. ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಕಳೆದ ಸೆ.೧೪ ರಂದು ಕೃಷಿ ಕೂಲಿಕಾರ್ಮಿಕರಿದ್ದ ಆಟೋ ಹೆಚ್‌ಎಲ್‌ಸಿ ಕಾಲುವೆಯಲ್ಲಿ ಬಿದ್ದು, ವಿಜಯನ ತಾಯಿ ಹುಲಿಗೆಮ್ಮ ಮೃತಪಟ್ಟಿದ್ದಳು. ಈ ಘಟನೆ ಮಾಸುವ ಮುನ್ನವೇ ಇದೀಗ ಆಕೆಯ ೫ ವರ್ಷದ ಮಗ ವಿಜಯ್‌ನನ್ನು ನೀರಲ್ಲಿ ಮುಳುಗಿಸಿ ಕೊಲೆ ಮಾಡಿರುವ ತಂದೆ ಯಂಕಪ್ಪ ಈಡಿಗೇರ್, ಮನೆಯಲ್ಲಿ ತಾನು ಸಹ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದಾನೆ.
ಮಂಗಳವಾರ ಬೆಳಗ್ಗೆ ೧೧-೧೨ ಗಂಟೆ ಸುಮಾರಿಗೆ ಘಟನೆ ನಡೆದಿದ್ದರೂ, ಸಂಜೆ ಇನ್ನೊಬ್ಬ ಮಗ ಅಪ್ಪ ಮನೆಯಲ್ಲೇ ಮಲಗಿದ್ದಾನೆ ಎಂದಿದ್ದನ್ನು ಗಮನಿಸಿ ಬಾಗಿಲು ತೆರೆದು ನೋಡಿದಾಗ ಘಟನೆ ಬಗ್ಗೆ ತಿಳಿದು ಬಂದಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮದ್ಯ ವ್ಯಸನಿಯಾಗಿದ್ದ ಯಂಕಪ್ಪ ಈಡಿಗೇರ್, ಪತ್ನಿ ಸಾವಿನಿಂದ ಬಂದ ಪರಿಹಾರದ ಹಣಕ್ಕಾಗಿ ನಿತ್ಯ ಬ್ಯಾಂಕ್‌ಗೆ ತೆರಳುತ್ತಿದ್ದ. ಕೆಲ ತಾಂತ್ರಿಕ ಸಮಸ್ಯೆಯಿಂದ ಬ್ಯಾಂಕ್‌ನವರು ಹಣ ನೀಡಿರಲಿಲ್ಲ. ಇದರಿಂದ ಬೇಸತ್ತ ಯಂಕಪ್ಪ, ತನ್ನ ಎರಡನೇ ಮಗ ಹೊರಗೆ ಆಟವಾಡಲು ಹೋದಾಗ ಈ ಘಟನೆಗೆ ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.