ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿವೃತ್ತ ಐಎಎಸ್ ಅಧಿಕಾರಿ ಎಂ. ಮದನ್ ಗೋಪಾಲ್, ಮಾಜಿ ನಿರ್ದೇಶಕ ಶಿವನ್, ಸಾಹಿತಿ ಅ.ರಾ. ಮಿತ್ರ, ಅಂಗವಿಕಲ ಈಜುಪಟು ಘವೇಂದ್ರ ಅಣ್ವೇಕರ್, ಸೇರಿದಂತೆ 67 ಮಂದಿಯನ್ನು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಆಯ್ಕೆ ಸಮಿತಿಯ ಶಿಫಾರಸು ಆಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಭಾನುವಾರ ಸಂಜೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರನಟರಾದ ದತ್ತಾತ್ರೇಯ (ದತ್ತಣ್ಣ), ಅವಿನಾಶ್, ಸಿಹಿಕಹಿ ಚಂದ್ರು, ಸೋಲಿಗರಲ್ಲಿ ಸಹಕಾರ ಸಂಸ್ಥೆಗಳ ಕುರಿತು ಅರಿವು ಮೂಡಿಸಿದ ಸೋಲಿಗರ ಮಾದಮ್ಮ, ರಾಮನಗರದ ಸಾಲುಮರದ ನಿಂಗಣ್ಣ, ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡ ಪಾಣಾರ, ಯಕ್ಷಗಾನ ಕಲಾವಿದರಾದ ಎಂ. ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ಪತ್ರಕರ್ತರಾದ ಎಚ್.ಆರ್. ಶ್ರೀಶ, ಜಿ.ಎಂ. ಶಿರಹಟ್ಟಿ ಪುರಸ್ಕೃತರಲ್ಲಿ ಸೇರಿದ್ದಾರೆ.