ದಾವಣಗೆರೆ: ಹಕ್ಕು ಪತ್ರಕ್ಕಾಗಿ ಬಂದ ಮಹಿಳೆಗೆ ಹಲ್ಲೆ ಮಾಡಿರುವ ವಿ.ಸೋಮಣ್ಣ ಸಚಿವನಾಗಲು ನಾಲಾಯಕ್, ಅಂತವರೆಲ್ಲ ಮಂತ್ರಿ ಮಂಡಲದಲ್ಲಿ ಇರಬಾರದು, ಸೋಮಣ್ಣನ ನಡವಳಿಕೆ ಬಿಜೆಪಿ ಸಂಸ್ಕೃತಿ ಏನೆಂದು ತೋರಿಸುತ್ತದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಗೆ ಆಪ್ತನ ಅಂತಿಮ ದರ್ಶನಕ್ಕೆ ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಬ್ಬ ಮಂತ್ರಿಗೆ ಅಧಿಕಾರ ಕೊಟ್ಟಿರೋದು ಮಹಿಳೆ ಮೇಲೆ ದಲಿತರ ಮೇಲೆ ಕೈ ಮಾಡಲಿಕ್ಕಾ? ಇವರಿಗೆ ಜನರ ಕಷ್ಟ ಕೇಳುವ ತಾಳ್ಮೆ, ಸಹನೆ ಇಲ್ಲದಿದ್ದರೆ ಮಂತ್ರಿ ಯಾಕೇ ಆಗಬೇಕು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇವರಿಗೆ ಸಹನೆ ಇಲ್ಲದಿದ್ದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಕಿಡಿಕಾರಿದರು.
ಸರ್ಕಾರಿ ಶಾಲೆಗಳಲ್ಲಿ ಓದುವವರು ಬಡವರ ಮಕ್ಕಳು. ಅವರಿಗೆ ತಿಂಗಳಿಗೆ 100 ರೂಪಾಯಿ ವಸೂಲಿ ಮಾಡುವುದು ಸರಿಯಲ್ಲ. ನಾವು ಅಧಿಕಾರದಲ್ಲಿದ್ದಾಗ ಬಡಮಕ್ಕಳಿಗೆ ಶಾಲೆಯಲ್ಲಿ ಉಚಿತವಾಗಿ ಹಾಲು ಬಿಸಿಯೂಟ, ಶೂ ಸೇರಿದಂತೆ ವಿವಿಧ ಯೋಜನೆಗಳನ್ನು ನೀಡಿದ್ದೇವೆ. ಆದರೆ ಬಿಜೆಪಿ ಸರ್ಕಾರ ಬಡ ಮಕ್ಕಳ ಬಳಿ ವಸೂಲಿ ಮಾಡಲು ಮುಂದಾಗಿದ್ದರು. ನಾವು ಹಾಗೂ ಪೋಷಕರು ಒತ್ತಾಯ ಮಾಡಿದ ಮೇಲೆ ಈ ನಿರ್ಧಾರವನ್ನು ಹಿಂಪಡೆದಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಎಲ್ಲೆಡೆ ಉತ್ತಮ ಸ್ಪಂಧನೆ ವ್ಯಕ್ತವಾಯಿತು. ಕರ್ನಾಟಕದಲ್ಲಿ 20 ದಿನ ಪಾದಯಾತ್ರೆ ಮಾಡಿದೆವು. ಗುಂಡ್ಲುಪೇಟೆಯಿಂದ ರಾಯಚೂರುವರೆಗೂ ಯಶಸ್ವಿಯಾಗಿ ನಡೆಸಿದೆವು. ರಾಜ್ಯಾದ್ಯಂತ ಸುಮಾರು ಒಂದು ಲಕ್ಷ ಜನರು ಭಾಗವಹಿಸಿ ಬೆಂಬಲಸಿದರು. ಈ ಬೆಂಬಲಕ್ಕೆ ಮುಖ್ಯ ಕಾರಣವೆಂದರೆ ಜನರಿಗೆ ಬಿಜೆಪಿ ಸರ್ಕಾರ ಬೇಡವಾಗಿದೆ ಆದ್ದರಿಂದ ಭಾರತ್ ಜೋಡೋಗೆ ಯಾತ್ರೆಗೆ ಇಷ್ಟು ಸ್ಪಂದನೆ ನೀಡಿದರು ಎಂದರು