ಖರ್ಗೆ ಮಾಡಿದ ಕೆಲಸ ಕಾರ್ಯಗಳ ಪಟ್ಟಿ ನೋಡಿದ್ರೆ ಸಿ.ಎಂ.ಗೆ ಹೊತ್ತುಕೊಳ್ಳಲು ಸಾಧ್ಯವಿಲ್ಲ: ಹರೀಶ್ ಕುಮಾರ್

MANGALORE
Advertisement

ಮಂಗಳೂರು: ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ವಿಚಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ತಾವು ಅವರನ್ನು ಒಪ್ಪಿಕೊಳ್ಳಲ್ಲ ಎಂದಿದ್ದಾರೆ. ಇವರು ಒಪ್ಪಿಕೊಳ್ಳುವುದಕ್ಕೆ ಬಿಜೆಪಿಗೆ ಅಧ್ಯಕ್ಷರಾಗಿದ್ದಲ್ಲ. ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಸರಕಾರದ ಮುಖ್ಯಮಂತ್ರಿ ಒಪ್ಪಿಕೊಳ್ಳುವುದೆಂದರೆ ಏನು ? ಇವರು ಒಪ್ಪಬೇಕೆಂದು ನಾವು ಬಯಸುವುದಿಲ್ಲ. ಇವರು ಅವರದೇ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರನ್ನು ಒಪ್ಪಿಕೊಳ್ಳುವುದಿಲ್ಲ. ಖರ್ಗೆಯವರು ಹೈದರಾಬಾದ್ ಕರ್ನಾಟಕಕ್ಕೆ ಏನೂ ಮಾಡಿಲ್ಲ ಎಂದಿದ್ದಾರೆ. ಖರ್ಗೆ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಪಟ್ಟಿ ಹೇಳಿದರೆ ಮುಖ್ಯಮಂತ್ರಿಗೆ ತಲೆಯಲ್ಲಿ ಹೊತ್ತುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಪ್ರಯತ್ನಿಸಿದ್ದು ಮಲ್ಲಿಕಾರ್ಜುನ ಖರ್ಗೆ. ಯುಪಿಎ ಸರಕಾರ ಇದ್ದಾಗ 371ಜೆ ತಂದಿದ್ದು ಖರ್ಗೆ. ಆಮೂಲಕ ಅನೇಕರಿಗೆ ಉದ್ಯೋಗ ಸಿಗುವಂತಾಗಿತ್ತು. ಬೊಮ್ಮಾಯಿ ಕೂಡ ಆ ಭಾಗದವರೇ. ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ತಿಳಿದಿಲ್ಲ ಎಂದಿದ್ದು ಮೂರ್ಖತನ. ಕ್ಷುಲ್ಲಕ ವಿಚಾರಗಳನ್ನು ಎತ್ತಿ ಮಾತನಾಡುವುದು ಮುಖ್ಯಮಂತ್ರಿ ಹುದ್ದೆಗೆ ಗೌರವ ತರಲ್ಲ ಎಂದು ಹೇಳಿದರು.
ನಾವು ಕೇಳುತ್ತೇವೆ, ಬಿಜೆಪಿ ಸರಕಾರದ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೈದರಾಬಾದ್ ಕರ್ನಾಟಕಕ್ಕೆ ನೀಡಿದ ಕೊಡುಗೆಯೇನು? ಹೈದರಾಬಾದ್ ಕರ್ನಾಟಕ ಅನ್ನುವುದನ್ನು ಕಲ್ಯಾಣ ಕರ್ನಾಟಕ ಅಂತ ಹೆಸರಿಟ್ಟಿದ್ದಾರೆ. ಅದೇ ಇವರ ಸಾಧನೆ. ಬಿಜೆಪಿ ಕೇಂದ್ರ ಸರಕಾರವೂ ಕಾಂಗ್ರೆಸ್ ಸರಕಾರದ ಯೋಜನೆಗಳಿಗೆ ಹೆಸರಿಟ್ಟಿದ್ದು ಮಾತ್ರ ಸಾಧನೆ.
ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರಕಾರದ ಹಗರಣದ ಬಗ್ಗೆ ರಾಹುಲ್ ಗಾಂಧಿಗೆ ಪತ್ರ ಬರೆಯುವುದಂದ್ರೇನು? ಇವರೇನು ವಿರೋಧ ಪಕ್ಷದ ನಾಯಕರೇ? ಡಬಲ್ ಇಂಜಿನ್ ಸರಕಾರ ಇದ್ದು ಇವರಿಗೆ ತನಿಖೆ ಮಾಡಲು ಸಾಧ್ಯವಿಲ್ಲವೇ? ರಾಜಕೀಯ ಹೇಳಿಕೆಯನ್ನು ಯಾಕೆ ನೀಡುತ್ತಿದ್ದಾರೆ. ಇವರಲ್ಲಿ ಲೋಕಾಯುಕ್ತ, ಸಿಬಿಐ ಎಲ್ಲವೂ ಇದೆ, ತನಿಖೆ ಮಾಡಬಹುದು. ಅದು ಬಿಟ್ಟು ರಾಹುಲ್ ಗಾಂಧಿಗೆ ಪತ್ರ ಬರೆಯುತ್ತೇನೆ ಅಂದರೇನು ಅರ್ಥವಾಗಲ್ಲ. ಇವರು ಧಮ್ ಇದ್ದರೆ ತನಿಖೆ ಮಾಡಿಸಲಿ. ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಯಾಕೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇವರದ್ದು ಭ್ರಷ್ಟಾಚಾರದ ಇತಿಹಾಸ ಹೇಳಿದರೆ ದೊಡ್ಡದಿದೆ. ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋದವರಿದ್ದಾರೆ. ಕೇಂದ್ರದಲ್ಲೂ ಇದ್ದಾರೆ. ಇವರು ನೈತಿಕತೆ ಇದ್ದರೆ ಕಾಂಗ್ರೆಸ್ ಸರಕಾರದ ಬಗ್ಗೆ ತನಿಖೆ ಮಾಡುವ ಧೈರ್ಯ ಮಾಡಲಿ ಎಂದರು ಹರೀಶ್ ಕುಮಾರ್.
ದೇಶದ ಆರ್ಥಿಕತೆ ಕುಸಿದು ಹೋಗಿದೆ, ರೂಪಾಯಿ ಮೌಲ್ಯ ಡಾಲರ್ ಎದುರು 83ಕ್ಕೆ ಕುಸಿದು ಹೋಗಿದೆ. ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್, ರೂಪಾಯಿ ಮೌಲ್ಯ ಕುಸಿದಿಲ್ಲ, ಡಾಲರ್ ಮೌಲ್ಯ ಹೆಚ್ಚಿದೆ ಎಂದಿದ್ದಾರೆ. ಇದೊಂದು ದೊಡ್ಡ ಲಾಜಿಕ್. ಈವರೆಗಿನ ಯಾವ ಫೈನಾನ್ಸ್ ಮಿನಿಸ್ಟರ್ ಗೂ ಈ ಚಿಂತನೆ ಬಂದಿರಲಿಲ್ಲ ಎಂದು ವ್ಯಂಗ್ಯವಾಡಿದ ಅವರು, ವಿಶ್ವದಲ್ಲಿ ನಂಬರ್ ವನ್, ನಂಬರ್ ಟು ಆಗುವ ರೀತಿ ನಮ್ಮವರು ಸಿರಿವಂತರಾಗುತ್ತಿದ್ದಾರೆ. ಬಡವರು ಅಧೋಗತಿಗೆ ಇಳೀತಿದ್ದಾರೆ. ಪ್ರಧಾನಿಯವರು ಹೇಳಿದ್ದರು, ದೇಶ ನಂಬರ್ ವನ್ ಆಗುತ್ತೆ ಎಂದು. ಇವತ್ತು ದೇಶ ಬಡತನದಲ್ಲಿ ನಂಬರ್ ವನ್ ಆಗಿದೆ. ಇದು ನಮ್ಮ ಪ್ರಧಾನ ಮಂತ್ರಿಯವರ ಸಾಧನೆಯಾಗಿದೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ಹೇಳುವವವರು ಈಗ ಎಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯವರ ದುರಾಡಳಿತ ಮಿತಿ ಮೀರಿದೆ. ಕಾಣಿಯೂರಿನಲ್ಲಿ ಇಬ್ಬರನ್ನು ಹಿಡಿದು ಕ್ರೂರವಾಗಿ ಥಳಿಸಿದ್ದಾರೆ. ಗ್ರಾಪಂ ಸದಸ್ಯರು ಕೂಡ ಕೃತ್ಯದಲ್ಲಿ ತೊಡಗಿದ್ದಾರೆ. ಮೊನ್ನೆ ಟೋಲ್ ಗೇಟ್ ಪ್ರತಿಭಟನೆ ಮಾಡಿದ ಮಹಿಳೆಯನ್ನು ಅಸಹ್ಯವಾಗಿ ಬರೆದು ಟ್ರೋಲ್ ಮಾಡುತ್ತಿದ್ದಾರೆ. ಬಿಜೆಪಿಯವರು ಮಹಿಳೆ ಎನ್ನುವುದನ್ನು ನೋಡದೆ ಕೀಳಾಗಿ ಬಿಂಬಿಸಿದ್ದಾರೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಅನ್ನುವುದು ಅಧೋಗತಿಗೆ ಹೋಗಿದೆ. ಜನ ಬೆಂದು ಹೋಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನ ತಯಾರಾಗಿದ್ದಾರೆ ಎಂದರು. ಸುದ್ದಿಗೋಷ್ಟಿಯಲ್ಲಿ ಎಂಎಲ್ಸಿ ಮಂಜುನಾಥ್ ಭಂಡಾರಿ, ಶಶಿಧರ ಹೆಗ್ಡೆ, ನವೀನ್ ಡಿಸೋಜ ಮತ್ತಿತರರಿದ್ದರು.