ಕುಷ್ಟಗಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಬೇಕೆಂಬ ಆದೇಶ ಸರ್ಕಾರ ಹೊರಡಿಸಿದರು ಸಹ ಕೆಲವೊಂದು ಇಲಾಖೆ ಅಧಿಕಾರಿಗಳು ಕಚೇರಿಗಳಲ್ಲಿ ಜಯಂತಿ ಆಚರಣೆ ಮಾಡದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.
ಪಟ್ಟಣದ ಕೃಷಿ ಇಲಾಖೆಯ ಮುಂದೆ ಪಂಚಮಸಾಲಿ ತಾಲೂಕು ಅಧ್ಯಕ್ಷ ಚಂದ್ರಶೇಖರ್ ನಾಲತ್ವಾಡ, ಪಂಚಮಸಾಲಿ ಘಟಕದ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಪಂಚಮಸಾಲಿ ತಾಲೂಕು ಅಧ್ಯಕ್ಷ ಚಂದ್ರಶೇಖರ್ ನಾಲತ್ವಾಡ ಮಾತನಾಡಿ, ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಕಿತ್ತೂರಾಣಿ ಚೆನ್ನಮ್ಮ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕೆಂಬ ನಿರ್ದೇಶನ ಹೊರಡಿಸಿದ್ದರು ಸಹ ಯಾವುದೇ ರೀತಿ ಬೆಲೆಕೊಡದೆ ಕೆಲವೊಂದು ಸರಕಾರಿ ಅಧಿಕಾರಿಗಳು ಕಿಮ್ಮತ್ತು ಕೊಡದೆ ತಮ್ಮ ಸರಕಾರಿ ಕಚೇರಿಗಳಲ್ಲಿ ಕಿತ್ತೂರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಅಮಾನತು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ಅವರಿಗೆ ಒತ್ತಾಯಿಸುತ್ತೇವೆ ಎಂದರು.
ಕೆಲ ಬೆರಳೆಣಿಕೆಯಷ್ಟು ಸರಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಆಚರಣೆ ಮಾಡಿದ್ದನ್ನು ಬಿಟ್ಟರೆ ಮತ್ತೆಲ್ಲಿ ಸಹ ಆಚರಣೆ ಮಾಡಿರುವುದಿಲ್ಲ, ಕೆಲವೊಂದು ಕಚೇರಿಗಳಲ್ಲಿ ಕಚೇರಿಯ ಸಿಪಾಯಿಗಳಿಂದ ಚೆನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ತಹಶೀಲ್ದಾರ ಗುರುರಾಜ್ ಚಲವಾದಿ ಅವರಿಗೆ ದೂರವಾಣಿ ಮೂಲಕ ಮಾತನಾಡಿದ್ದು ಯಾವ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಣೆ ಮಾಡಿರುವುದಿಲ್ಲ ಅಂತಹ ಕಚೇರಿಯ ಅಧಿಕಾರಿಗಳ ವಿರುದ್ಧ ಮಂಗಳವಾರದಂದು ಲಿಖಿತರೂಪದಲ್ಲಿ ಮನವಿ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದರು.
ಉಮೇಶ ಮಂಗಳೂರು,ಚನ್ನಬಸಪ್ಪ ನಾಯಕವಾಡಿ, ಮಹೇಶ ಮಂಗಳೂರು, ಬಸವರಾಜ, ಬಸವರಾಜ ಹೊರಪೇಟಿ, ಮಹಾಂತೇಶ್ ಬಂಡೇರ, ಅನಿಲ್ ಅಲ್ ಮೆಲ್,ಚಂದ್ರಶೇಖರ,ಚಂದ್ರಶೇಖರ ಹವಾಲ್ದಾರ, ಮಂಜುನಾಥ, ಬಸವರಾಜ,ಮುತ್ತಣ್ಣ ಸೇರಿದಂತೆ ಅನೇಕರು ಇದ್ದರು.