ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡು ಬಲಿಯಾದ ನಾಲ್ವರು ಸೈನಿಕಲ್ಲಿ ಒಬ್ಬರು ಕಾಸರಗೋಡು ಜಿಲ್ಲೆಯವರು ಇದ್ದಾರೆ. ಚೆರುವತ್ತೂರು ಕಿಳಕ್ಕೇಮುರಿ ಗ್ರಾಮದ ಕೆ.ವಿ.ಅಶ್ವಿನ್ (24) ಈ ದುರಂತದಲ್ಲಿ ಬಲಿಯಾದವರಲ್ಲಿ ಒಬ್ಬರು. ಭಾರತೀಯ ಸೈನ್ಯದ ಹಿರಿಯ ಅಧಿಕಾರಿಗಳು ಅವರ ಮನೆಯವರಿಗೆ ಈ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಕಟ್ಟಡ ನಿರ್ಮಾಣ ಕಾರ್ಮಿಕ ಅಶೋಕನ್-ಕೆ.ವಿ.ಕೌಸಲ್ಯ ದಂಪತಿ ಪುತ್ರ. ಇವರಿಗೆ ಸಹೋದರಿಯರಾದ ಅಶ್ವತಿ, ಅನಶ್ವರ ಇದ್ದಾರೆ. ನಾಲ್ಕು ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಅಂಡ್ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಂಜಿನಿಯರ್ ಆಗಿ ಅಶ್ವಿನ್ ಸೈನ್ಯ ಸೇರಿದ್ದರು.
ರಜೆಗೆ ಊರಿಗೆ ಬಂದಿದ್ದ ಅಶ್ವಿನ್ ಕಳೆದ ತಿಂಗಳಷ್ಟೇ ಕರ್ತವ್ಯಕ್ಕೆ ಮರಳಿದ್ದರು. ಸ್ನೇಹಮಯಿ ವ್ಯಕ್ತಿತ್ವದ ಅಶ್ವಿನ್ ಅವರು ಊರಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲಿ ಸಕ್ರಿಯವಾಗಿದ್ದರು. ದುರಂತದಲ್ಲಿ ಇವರು ಬಲಿಯಾಗಿರುವ ಸುದ್ದಿ ಹರಡುತ್ತಿದ್ದಂತೆ ಚೆರುವತ್ತೂರಿನ ಇವರ ಮನೆಗೆ ಜನರು ಬರುತ್ತಿದ್ದಾರೆ. ಇವರ ಮೃತದೇಹವನ್ನು ಅ.23 ರಂದು ಊರಿಗೆ ತರುವ ನಿರೀಕ್ಷೆಯಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.