ವಿಜಯಪುರ: ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸ್ವಾತಂತ್ರ ಸೇನಾನಿ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಾಧವಾನಂದ ಪ್ರಭುಗಳ 44ನೇ ಪುಣ್ಯತಿಥಿ ಸಪ್ತಾಹದ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಮಾಧವಾನಂದ ಪ್ರಭುಗಳ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ಬಳಿಕ ಕಳಸಾರೋಹಣದಲ್ಲಿ ಪಾಲ್ಗೊಂಡು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧವಾನಂದ ಸ್ವಾಮಿಗಳು ಬಹುತ್ವದ ಪರವಾಗಿದ್ದರು. ಈ ಕಾರಣಕ್ಕೆ ಇವರನ್ನು ಸ್ಮರಿಸಬೇಕಾಗಿದೆ ಎಂದರು.
ಪಾಳೇಗಾರಿಕೆ ಸಮಾಜಕ್ಕೆ, ಜನರ ಸ್ವಾತಂತ್ರ್ಯಕ್ಕೆ ಕಂಟಕ. ಹೀಗಾಗಿ ಬಲಾಡ್ಯರ ಕೈಯಲ್ಲಿ ಅಧಿಕಾರ ಇರಬಾರದು ಎಂದು ಮಹಾತ್ಮಗಾಂಧಿಯವರು ಹೇಳಿದ್ದರು ಎಂದು ವಿವರಿಸಿದರು.
ಸ್ವಾತಂತ್ರ ಸೇನಾನಿಗಳಾದ ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಭಾರತದೊಳಗಿದ್ದ ವರ್ಣ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆ ಹಾಗೂ ಭಾರತದಲ್ಲಿನ 560 ಸಂಸ್ಥಾನಗಳಲ್ಲಿ ಇದ್ದ ಒಳ ಮುನಿಸನ್ನು ಬ್ರಿಟೀಷರು ಬಳಸಿಕೊಂಡು ಭಾರತವನ್ನು ಆಳಿದರು.
ಜಾತಿ ವ್ಯವಸ್ಥೆ ಕಾರಣಕ್ಕೆ ಭಾರತದ ಶೂದ್ರರು ಕೇವಲ ಉತ್ಪಾದನೆ ಮಾಡಬೇಕಿತ್ತು. ಆದರೆ ತಾವು ಉತ್ಪಾದಿಸಿದ್ದನ್ನು ಅನುಭವಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಇರಲಿಲ್ಲ. ಈ ಅಸಮಾನತೆ ವಿರುದ್ಧ ಶ್ರೀ ಮಾಧವಾನಂದ ಸ್ವಾಮೀಜಿಯವರು ಧ್ವನಿ ಎತ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ಜನರ ಮುಕ್ತಿಗಾಗಿ ಶ್ರಮಿಸಿದರು ಎಂದು ಮೆಚ್ಚುಗೆ ಸೂಚಿಸಿದರು.