ಹುಬ್ಬಳ್ಳಿಯಲ್ಲಿ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನಕ್ಕೆ ಚಾಲನೆ

Advertisement

ಹುಬ್ಬಳ್ಳಿ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಶಕ್ತಿ ಬಳಸಿ ಭಾರತದಲ್ಲಿ 2030ರ ವೇಳೆಗೆ ಇಂಧನ ಅಗತ್ಯತೆಯನ್ನು ಶೇ.50ಕ್ಕೆ ಇಳಿಸಲು ಉದ್ದೇಶಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ “ಏಕ್ ಪೇಡ್ ಮಾ ಕೆ ನಾಮ್” ಗಿಡ ನೆಡುವ ಅಭಿಯಾನಕ್ಕೆ ನಗರದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಹೊಗೆ ಉಗುಳುವಿಕೆ ನಿಗ್ರಹಿಸಲು ಕೇವಲ 10 ವರ್ಷದಲ್ಲಿ ಭಾರತ ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು. ಇಂಧನ ಅಗತ್ಯವನ್ನು ಶೇ.50ಕ್ಕೇ ಇಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಜಾಗತಿಕ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಗೆ ಉಗುಳುವಿಕೆಯ ನಿಗ್ರಹ ಹಾಗೂ ಹಸಿರನ್ನು ಹೆಚ್ಚಿಸಿ ಪರಿಸರ ಸಂರಕ್ಷಣೆಯಲ್ಲಿ ಭಾರತ ಇಂದು ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಭೂಮಿ ತಾಯಿಯನ್ನು ರಕ್ಷಿಸುವ ಸಲುವಾಗಿ ಪ್ರತಿಯೊಬ್ಬರೂ ಹೆತ್ತ ತಾಯಿ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದು ಕರೆ ನೀಡಿದರು.

ಈ ಅಭಿಯಾನದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರೂ ತಾಯಿ ಹೆಸರಿನಲ್ಲಿ ಗಿಡ ನೆಡುವ ಮೂಲಕ “ಏಕ್ ಪೇಡ್ ಮಾ ಕೆ‌ ನಾಮ್” ಅಭಿಯಾನ ಯಶಸ್ವಿಗೊಳಿಸಿದರು.

ಎಲ್ಲರೂ ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿ ತಾಯಿಗಾಗಿ ಒಂದು ವೃಕ್ಷ ನೆಡೋಣ. ಭೂಮಿ ತಾಯಿ ಮಡಿಲಿನಲ್ಲಿ ನಮ್ಮ ತಾಯಿಗಾಗಿ ಒಂದು ವೃಕ್ಷ ನೆಟ್ಟು ಪೋಷಿಸಿ ನಮ್ಮ ಜವಾಬ್ದಾರಿ ನಿರ್ವಹಿಸುವ ಮೂಲಕ ತಾಪಮಾನ ಏರಿಕೆ ನಿಯಂತ್ರಣಕ್ಕೆ ಪ್ರಯತ್ನಿಸೋಣ ಎಂದು ಹೇಳಿದರು.

ಶಾಸಕ ಮಹೇಶ್ ಟೆಂಗಿನಕಾಯಿ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ಪ್ರಮುಖರಾದ ಚನ್ನು ಹೊಸಮನಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.